ಗದ್ಯಂ ಹೃದ್ಯಂ

ಸಿರಿಲಣ್ಣನ ಶಿಕಾರಿ ಸಾಹಸಗಳು ಭಾಗ – 2 (a)

(ಹಿಂದಿನ ಸಂಚಿಕೆಯಿಂದ) ಗದ್ದೆಯಿಂದ ಚಂದ್ರಣ್ಣನ ಮಾತನಾಡಿಸಿಕೊಂಡು ಬಂದ ಸಿರಿಲಾ ಸೀದಾ ಬಾಳಗದ್ದೆ ಕಡೆ ಹೊರಟ. 

ಸಿದ್ದೇಶಣ್ಣ ಅಂಗಡಿಯಲ್ಲಿ,  ಸಣ್ಣಪ್ಪು ಮನೆಗೆ ಒಂದು ಡಜನ್ ಮೊಟ್ಟೆ, ಮತ್ತೆ ಮಗಳಿಗೆ ಕುರುಕು ತಿಂಡಿ ಪೊಟ್ಟಣ ತೆಗೊಂಡು ಬಾಗಿನಲ್ಲಿಟ್ಟು ಬೈಕ್ ಸ್ಟಾರ್ಟ್ ಮಾಡಿದ ಹೊತ್ತಿಗೆ, ಎಡಭಾಗದಿಂದ ಬೈಕ್ ಸವಾರನೊಬ್ಬ ಹಿಂದೆ ಬರುವ ಗಾಡಿಗೆ ಅಡ್ಡ ಕೈಯನ್ನು ತೋರಿಸಿ ಬರುತ್ತಿರುವವನು ಸಿರಿಲ್ ಎಂದು ಕಂಡುಹಿಡಿಯಲು ಸಣ್ಣಪ್ಪುಗೆ ಬಹಳ ಸಮಯವೇನು ಬೇಕಾಗಿರಲಿಲ್ಲ. 

ಸಿರಿಲಾ ಹತ್ತಿರ ಬರುತ್ತಿದ್ದಂತೆಯೇ.. ಹೇಯ್ ಎಲ್ಲೋ ಮಾರಾಯ ನೀನೂ ತತ್.. ಐದು ನಿಮಿಷ ಲೇಟಾಗಿ ಬಂದಿದ್ರೆ ಹೊರಟೇಬಿಡ್ತಿದ್ದೀಯಲ್ಲೋ. 

ಸಣ್ಣಪ್ಪು: ನಿಂಗೆ ಫೋನ್ ಮಾಡಿದ್ದು  ಯಾವಾಗ ನೀನು ಬಂದಿರೋದು ಇಷ್ಟೊತ್ತಿಗೆ. ಹೆಂಡ್ತಿ ಹೇಳಿದಳೆ  ಮರ್ಯಾ ಬೇಗ ಮೊಟ್ಟೆ  ತೊಗೊಂಡು ಮನೆಗೆ ಬಾ ಅಂತ.. 

ಸಿರಿಲ: ಹೋಹೋ ಫೋನ್ ಮಾಡಿ ಒಣಗಿದು ಮೀನು ಸಾರು ಮಾಡೋಕ್ ಹೇಳು. ಇವತ್ತು ಮೊಟ್ಟೆತಿಂದಿಲ್ಲ ಅಂದ್ರೆ ಏನು ಆಗಲ್ಲ. 

ಸಣ್ಣಪ್ಪು ಸರಿ ಬಾ.. 

ಬಾಳಗದ್ದೆ ಅಂದ್ರೆ, ಸಕಲೇಶಪುರ- ಹಾಸನ ಹೆದ್ದಾರಿಯಲ್ಲಿ ಬರುವ ಸಣ್ಣ ಊರು. ಇಲ್ಲಿರುವ  ಸೀಮಾ ವೈನ್ಸ್ ದಶಕದಿಂದಲೇ ಸುಪ್ಪ್ರಸಿದ್ದ ಊರ ಕುಡುಕರ “ಬಾರು”. 

ಸೀಮಾ ವೈನ್ಸ್ ಗೌಡ್ರು ಊರಿನ ಎಲ್ಲ ಕುಡುಕರಿಗೂ ಚಿರಪರಿಚಿತರು. 

ಅದೆಷ್ಟು ಅನಿಷ್ಠು ಗಂಡುಮುಂಡೆವು “ ಗೌಡ್ರೆ … ಇವತ್ತು ದುಡ್ಡಿಲ್ಲ ಸಾಲದಲ್ಲಿ ಎರಡು ಒರಿಜಿನಲ್ ಚಾಯ್ಸ್ ಕೊಡಿ ಅಂತ ಕೇಳ್ಕೊಂಡು ಕುಡ್ದು ದುಡ್ಡು ಕೊಡದೇ ಪರಾರಿಯಾಗಿದವೋ, ಅಷ್ಟೇ ಕುಡುಕರು ಕುಡ್ದು ತೂರಾಡೋ ಹೊತ್ತಲ್ಲಿ ಜಾಸ್ತಿ ಬಿಲ್ ಹಾಕಿ ಜೇಬಿಗೆ ಕತ್ರಿ ಹಾಕಿ ವಸೂಲಿ ಮಾಡ್ಕೊಂಡು ಇದ್ದಾರೆ. 

ಇಬ್ಬರು ಹೋಗಿ ಟೇಬಲ್ ಅಲ್ಲಿ ಕುತ್ಕೊಂಡು ಮದ್ಯಪಾನ ಸೇವೆಗೆ ರೇಡಿ ಆದರು. 

ಸಪ್ಪ್ಲೈರ್ ಎರಡು ಕ್ವಾಟ್ರು ಟೇಬಲ್ ಮೇಲೆ ಇಟ್ಟು. ಮೆಲಕು ಹಾಕಲು ಒಂದು ಬಟ್ಟಲಲ್ಲಿ ತಲತಲಾಂತರ ಮದ್ಯ ಪ್ರೀಯರ ಮೆಚ್ಚಿನ ಉಪ್ಪು ಬಟಾಣಿಯನ್ನು , ಪ್ಲಾಸ್ಟಿಕ್ ಲೋಟವನ್ನು ತಂದುಕೊಟ್ಟನು. 

ಎರಡು ಪೆಗ್ ಬಾಯಿಂದ ಗಟ ಗಟನೆ  ಇಳಿಯುತ್ತಿದ್ದಂತೆಯೇ ಸಿರಿಲನಿಗೆ  ಮನೆಯಿಂದ  ಫೋನ್ ಬಂತು. ಸೋಬಿನ ಸಿರಿಲನಿಗೆ ಫೋನ್ ಮಾಡಿ ಪೊಲೀಸ್ ಸ್ಟೇಷನಲ್ಲಿ ನಡೆದದ್ದೆಲ್ಲಾ ಹೇಳಿದಳು. 

ಸಿರಿಲ: ತಾಯಿ , ಮಗ  ಏನಾದ್ರೂ ಮಾಡ್ಕೊಕೊಳಿ ನಂಗೆ ಏನೂ ಹೇಳ್ಬೇಡಿ. ಆದ್ರೆ ಒಂದು, ಬಂದೂಕು ನನ್ನ ಜೀವ ಆಸ್ತಿ ಎಲ್ಲಾ ನಾಳೆ ಮತ್ತೆ ಪೊಲೀಸ್ ಏನಾದ್ರೂ ಸೀಜ್ ಮಾಡ್ತೀನಿ ಅಂತ ಗ್ಯಾರೇಜ್ ಹತ್ರ ಬಂದು ತಕರಾರು ಮಾಡಿದ್ರೆ, ನಿಮ್ಮಿಬ್ರು ಗ್ರಹಚಾರ ಮನೆಗೆ ಬಂದು ಬಿಡಿಸ್ತೀನಿ ಹುಷಾರ್. 

ಸೋಬಿನ : ಅಯ್ಯೋ ನಿಮ್ಮ್ ರೋಧನೆ ಕೇಳೋಕ್ಕೆ ಆಗಲ್ಲ. ಬೇಗಾ ಮನೆಗೆ ಬನ್ನಿ. ಆನೆಗಳು ಊರೊಳಗೆ ಬಂದಿದವಂತೆ. ಚಾರ್ಲಿಯಣ್ಣ ಇವಗಷ್ಟೇ ಹೇಳೂದ್ರು . 

ಸಿರಿಲ: ಹೇಯ್ ಇಡು.. ಒಂದು ದಿನ ನೆಮ್ಮದಿಯಿಂದ ಕುಡಿಯೋಕ್ಕೆ ಬಿಡಲ್ಲ. 

ಸಣ್ಣಪ್ಪು: ಹೇಯ್ ಸಿರಿಲಾ….  ಸುಮ್ನಿರು  ಮಾರಾಯ ಬಾರಲ್ಲಿದಿಯ ನೋಡಿದವ್ರು ಏನು ಅಂದುಕೊಳೊಲ್ಲ ಹೇಳು. ಏನ್ ಅಂದ್ಕೊಳ್ತಾರೆ.. ? ಸರಿ ಕೂಲ್ ಡೌನ್..  ಕೂಲ್ ಡೌನ್  ಮಾಡ್ಕೋ .. 

ಸಿರಿಲ: ನಿನ್ ಇಂಗ್ಲೀಷ್ ನಿಲ್ಸು.. 

ಸಣ್ಣಪ್ಪು: ನಾನೆಲ್ಲಿ ಇಂಗ್ಲಿಷ್ ಮಾತಾಡ್ತಿನೋ? ಕುಡಿದಾಗ ಹಾಗಾಗೇ ಒಂದೆರಡು ಪದ ಉರುಳುತ್ತೆ. 

(ಸಣ್ಣಪ್ಪು ಫೋನ್ ರಿಂಗ್ ಆಗತೊಡಗಿತು.)

ಸಿರಿಲ: ನೋಡು ಈಗ ನಮ್ಮನೇದು ಮುಗಿತು. ಈಗ ನಿಮ್ದು. 

ಸಣ್ಣಪ್ಪು: ಹಾ.. ಹೇಳೇ 

ಜ್ಯೋತಿ : ಏನ್ ಹೇಳ್ಲಿ ಇವತ್ತು ರಾತ್ರಿ ಊಟಕ್ಕೆ ಒಲೆಲಿ ಕೆಂಡ ಇದೆ. ಅದೇ ತಟ್ಟೆಗೆ ಹಾಕ್ಕೊಂಡು ತಿನ್ನಿ. ಮೊಟ್ಟೆ ತರ್ತೀನಿ ಅಂತ ಪೇಟೆಗೆ ಹೋದವ್ರು ಎಲ್ಲಿ ಮರಗಟ್ಟಿದೀರಾ. 

ಸಣ್ಣಪ್ಪು: ಜ್ಯೋತಿ.. ಒಂದು ಪ್ರಶ್ನೆಗೆ ಒಂದೇ ಉತ್ತರ ಕೊಡೋಕೆ ಅಗೋದು ಒಂದೇಸಲಕ್ಕೆ ಹತ್ತು ಪ್ರಶ್ನೆ ಕೇಳ್ಬೇಡಾ. 

ತಾಯಿ ಮಗಳು ತಿಂದ್ರಾ.. ? ತಿಂದು ಮಲ್ಕೊಳ್ಳಿ ನಾನು ಒಲೆಯಲ್ಲಿರೋ ಕೆಂಡನೆ ತಿಂತೀನಿ.. ಅದು ಬಿಸಿ ಇಲ್ಲಾಂದ್ರೆ, ಇದ್ದಿಲಾದ್ರು ತಿಂತಿನಿ.  ಮುಂದುಗಡೆ ಬಾಗಿಲಿಗೆ ಚಿಲ್ಕಾ ಕಾಳಿ ಮಲ್ಕೊಳ್ಳಿ. ನಾನು ಹಿಂದುಗಡೆ ಬಾಗಿಲಿಂದ ಬರ್ತೀನಿ. 

ಸಣ್ಣಪ್ಪು: ಈಗ ಫೋನ್ ಇಡು.. 

ನನ್ ಹೆಂಡ್ತಿ ಡ್ರಾಕುಲಾ ಮಾರಾಯ … ಮನೇಲಿ ಸಾಕಿರೋ ಕೋಳಿಗಳು ಮೊಟ್ಟೆ ಇಡಲ್ವಾ? ಇವ್ಳಿಗೆ ಪೇಟೆ ಮೊಟ್ಟೇನೆ ಬೇಕಂತೆ ಸಾರು ಮಾಡೋಕ್ಕೆ. ಇವ್ಳು ಮಾಡಿದ್ದು ಮನುಷ್ರು ತಿನ್ನಲ್ಲ ಅಂತದ್ರಲ್ಲಿ ನಾನು ಬದುಕಿರೋದೇ ಹೆಚ್ಚು .. 

ಸಿರಿಲ: ಸದಾ, ಸುಮ್ನಿರು ಮರಾಯ ಇನ್ನೊಂದು ಎರಡು ನೈನ್ಟಿ ತರ್ಸೋಣ. ಎಲ್ಲ ಸರಿ ಆಗುತ್ತೆ 

(ಇದು ಅಪರೂಪಕ್ಕೆ ಕುಡಿದ ಮತ್ತಲ್ಲಿ ಕರೆಯೋದು ಸಣ್ಣಪ್ಪು ಪೂರ್ಣ ಹೆಸರು ಸದಾಶಿವ )

ಸಣ್ಣಪ್ಪು : ಸಿರಿಲಾ.. ಕುಡ್ಕೊಂಡು ಮಾತಾಡ್ತಿನಿ ಅಂತ ಅನ್ಕೋಳ್ಬೇಡಾ.. 

ಮೊನ್ನೆ ನಿಮ್ಮ ತಾಯಿ ಮನೆಗೆ ಹೋಗಿದ್ದೆ ಹಿಂಗೇ, ಅಮ್ಮನ ಮತ್ತೆ ನಿಮ್ಮ ತಂದೆನ ಮಾತಾಡಿಸ್ಕೊಂಡು ಬರೋಣಾ ಅಂತ. 

ಹೊರಡುವಾಗ ತುಂಬಾ ಒತ್ತಾಯ ಮಾಡಿದ್ರು ಊಟ ಮಾಡ್ಕೊಂಡು ಹೋಗು ಕೋಳಿ ಸಾರು ಮಾಡಿದೀನಿ ಅಂತ ನಾನು ಸರಿ ಅವ್ರಿಗೆ ಬೇಜಾರ್ ಆಗಬಾರದ್ದು ಅಂತಾ ಸ್ವಲ್ಪ ಊಟ ಮಾಡ್ದೆ. 

ಮತ್ತೆ, ಜ್ಯೋತಿಗೂ ಸ್ವಲ್ಪ ತೊಗೊಂಡು ಹೋಗು ಅಂತ ಒಂದು ಬಾಕ್ಸ್ ಅಲ್ಲಿ ಹಾಕಿ ಕೊಟ್ರು. 

ಮನೆಗೆ ಹೊರಡುಬೇಕಾದ್ರೇನೇ ರಾತ್ರಿ ಹತ್ತು ಗಂಟೆ ಆಗಿತ್ತು. ಬೈಕ್ ಸ್ಟಾರ್ಟ್ ಮಾಡಿ ಹೊರಟೆ, ನನ್ನ ಪಕ್ಕದಲ್ಲೇ ಯಾರೋ ಬರ್ತಾ ಇದ್ದಾರೆ ಅನ್ನೋತರ ಇತ್ತು. ಮನೆಗೆ ಬಂದು ಜ್ಯೋತಿ ಕೈಯ್ಯಲ್ಲಿ ಬಾಕ್ಸ್ ಕೊಟ್ಟೆ.. ಅವ್ಳು ಊಟ ಮಾಡುವಾಗ ಬಡ್ಸ್ಕೊಂಡು ಹೇಳಿದ್ಲು.. 

 ರೀ… ಏನಿದು ಅಳಸಿಹೋಗಿದೆ ಸಾರು ಅಂತ ಹೇಳಿದ್ಲು ನಾನು ಸ್ವಲ್ಪ ರುಚಿ ನೋಡ್ದೆ ನಂಗು ಅಂಗೇ ಇತ್ತು 

ಆದ್ರೂ ಮೇಲೆ ಇಡೀ ರಾತ್ರಿ ವಾಂತಿ ಮಾಡಿದ್ದೀನಿ. ಜ್ಯೋತಿ ಸೋಂಕಿನ ಔಷದಿ ಮಾಡಿಕೊಟ್ಟಮೇಲೆ ಸ್ವಲ್ಪ ಸರಿಯಾಯ್ತು. 

ಇಷ್ಟೇ ಅಲ್ಲ ಮೊನ್ನೆ ಪೇಟೆಯಿಂದ ಬರುವಾಗ  ಕಮಲಮ್ಮ ನಡ್ಕೊಂಡು ಬರ್ತಾ ಇತ್ತು. ಕಾರಿನಲ್ಲಿ ಕುರುಸ್ಕೊಂಡು ಬರಬೇಕಾದರೆ ಒಂದು ವಿಷಯ ಹೇಳುದ್ರು  

ಸಣ್ಣಪ್ಪು ನಮ್ಮನೆ ಹಿಂದುಗಡೆ ತೋಟದಲ್ಲಿ  ರಾತ್ರಿ ಯಾರೋ ಹೆಂಗಸು ಬಂದು ಅಳೋ ತರ ಸದ್ದು ಕೇಳಿಸುತ್ತೆ  ಏನಿರಬಹುದು ಅಂತ 

ನಾನು ಸುಮ್ನೆ ನಗಾಡಿಕೊಂಡು ತಮಾಷೆ ಮಾಡಿ ಅವ್ರ ಮನೆ ಹತ್ತಿರ ಬಿಟ್ಟೆ. 

ಸಿರಿಲ್: ಸದಾ ನಾನು ಶಿಕಾರಿಗೆಲ್ಲ ಹೋಗ್ತೀನಿ ರಾತ್ರಿ ಎರಡು ಮೂರು ಗಂಟೆ ವರೆಗೆ ತೋಟದಲ್ಲೇ ಇರ್ತಿವಿ ನಮಿಗೆ ಯಾರು ಈತರ ಮಾಡಿಲ್ಲ ನೋಡಿನು ಇಲ್ಲ 

ಆದ್ರೆ ಒಂದು ಐದು ಆರು ವರ್ಷದ ಹಿಂದೆ ಅವತ್ತು ಒಂದು ದಿನ .. ಮನೆ ಹೆಂಗುಸ್ರು ಎಲ್ಲ ಹೇಳಿದ್ರು ನಾನು ಶಿಕಾರಿಗೆ ಬರ್ತೀವಿ ಅಂತ. 

ಸರಿ ಅಂತ ಕರ್ಕೊಂಡು ಹೋಗಿದ್ದೆ. 

ಒಂದು ಒಳ್ಳೆ ಕಾಡು ಹಂದಿ ಸಿಗ್ತು ಅಂತ ಗುಂಡು ಹೊಡ್ದೆ. ಹತ್ರ ಹೋಗಿ ನೋಡಿದ್ರೆ ಅಲ್ಲೇನು ಇರ್ಲಿಲ್ಲ 

ಏನು ಮಾಡೋದು? 

ಆದ್ರೆ ಗುಂಡೇಟು ಹೊಡಿಬೇಕಾದ್ರೆ ಕಿರುಚಿದ್ದು ಒಂದು ಹೆಂಗಸಿನ ಧ್ವನಿಯಲ್ಲಿ ಇತ್ತು. 

ನನ್ನ ಹೆಂಡತಿ ಮತ್ತೆ ಅತ್ತಿಗೆಯವರೆಲ್ಲ ಮನೆಗೆ ಹೋಗೋಣ ಅಂತ ಕಿರಿ ಕಿರಿ ಮಾಡೋಕ್ಕೆ ಶುರು ಮಾಡಿದ್ರು. ಅವತ್ತು ಅಲ್ಲಿ ಅಂತಹದ್ದು ಏನು ನಡೆದಿರಲಿಲ್ಲ, ಹೆದರ್ಕೊಂಡು ನಾವು ಮನೆಗೆ ವಾಪಸ್ ಬಂದೆವು. 

ಮನೆಗೆ ಬಂದ್ಮೇಲೆ.. ರಾತ್ರಿ ಇಡೀ ರೋಡ್ ಅಲ್ಲಿ “ಎನ್ನನು ಕೆರ್ಯೆರ್” (ನನ್ನನು ಸಾಯಿಸಿದ್ರು) ಆಂತ ಬೆಳೆಗ್ಗಿನ ಜಾವ ೩ ಗಂಟೆ ವರೆಗೂ ಒಂದು ಹೆಂಗಸು ಕಿರುಚುತ್ತಾ ಇದ್ದಳು. ಅದು ದೆವ್ವವೋ ಭೂತವೋ ಒಂದು ಗೊತ್ತಿಲ್ಲ 

ಸಾಲದಕ್ಕೆ ನಮ್ಮ  ಎದುರುಗಡೆ  ಮನೆ ಕಮಲಮ್ಮನು ಕಿರುಚಾಡುತ್ತಿದ್ದಳು. 

ಸಣ್ಣಪ್ಪು: ಹೌದಾ 

ಸಿರಿಲ್: ಹೌದು, ಸರಿ ಬಿಡು ಈಗ ಮನೆಗೆ ಹೋಗೋಣ. ಮನೇಲಿ ಹೆಂಡತಿ ಬಾಯಲ್ಲಿ ದೆವ್ವ ಬಂದು ಕಿರುಚಾಡಬಹುದು 

ಸಣ್ಣಪ್ಪು: ಸರಿ ಸರಿ, ಬಾ ಹೋಗೋಣ 

ಸಿರಿಲ ಇತ್ತೀಚಿಗೆ ಒಂದು ಹದಿನೈದು ವರ್ಷದಿಂದ ಬೇರೆ ಮನೆ ಮಾಡಿಕೊಂಡು ಇರುವುದರಿಂದ, ಇಬ್ಬರು ಬೇರೆ ಬೇರೆ ದಾರಿಯಲ್ಲಿ ಹೋಗಬೇಕು. ಹಾಗೆ ಸಣ್ಣಪ್ಪು ತನ್ನ ಮನೆಯ ತಿರುವು ಬಂದೊಡನೆ ಬೈಕ್ ಎಡಕ್ಕೆ ತಿರುಗಿಸಿ ಸಿರಿಲಾನಿಗೆ ಕೈ ಸನ್ನೆ ಮಾಡಿ ತಾನು ಹೋಗುವುದಾಗಿ ಹೇಳಿದ. 

ಹೀಗೆ ಸಿರಿಲ್ ತನ್ನ ಮನೆಯ ದಾರಿಯಲ್ಲಿ ತೆರಳುವಾಗ. ಒಮ್ಮೆಲೇ ಯಾರೋ ಕರೆದಂತಾಯಿತು. ಅದಕ್ಕೆ ಕಿವಿಗೊಡದೆ ತನ್ನಷ್ಟಕ್ಕೆ ಮುಂದೆ ಬೈಕ್ ಓಡಿಸುತ್ತಿರುವಾಗ. 

ಯಾರೋ ಬಂದು ತನ್ನ ಬೈಕ್ ಹಿಂದೆ ಕುಳಿತಂತೆ ಬೈಕಿನ ಹಿಂಬದಿಯ ಚಕ್ರ ಸ್ವಲ್ಪ ಒಳಹೋದಂತಾಯಿತು. 

ಯಾ ಯಾರು….  ಎಂದು ಕೇಳಲು ಸ್ವಲ್ಪವೂ ಅವಕಾಶವೇ ಕೊಡದೆ ಎರಡು ಕೈಗಳು ಬಲವಾಗಿ ಆತನ ಕುತ್ತಿಗೆಯನ್ನು ಹಿಡಿದು ಉಸಿರಾಡಲು ಬಿಡದಂತೆ ಹಿಸುಕಿದಂತಾಗುತ್ತಿತ್ತು. 

ಮನಸ್ಸಿನಲ್ಲಿ ದೇವರನಾಮ ಹೇಳುತ್ತಲೇ ಕಷ್ಟಪಟ್ಟು ಬೈಕ್ ಮುಂದೆ ನಡೆಸುತ್ತ ಮನೆಯ ಹತ್ತಿರ ತಲುಪುತ್ತಿದ್ದಂತೆಯೇ ಕತ್ತಿನಿಂದ ಕೈಗಳು ಸಡಿಲವಾಯಿತು. 

ಮನೆಯ ಬಳಿ ಬಂದು ಬೈಕ್ ಸ್ಟಾಂಡ್ ಹಾಕಿ ನಿಲ್ಲಿಸಿ. ಸುತ್ತಲೂ ನೋಡಿದ. ಯಾರು ಇರಲಿಲ್ಲ. 

ಮನೆಯೊಳಗೆ ಹೋಗಿ ಸ್ನಾನ ಮಾಡಿ ಮಲಗಿದವನಿಗೆ ಎರಡು ದಿನ ವಿಪರೀತ ಜ್ವರವಿತ್ತು. 

ಸಣ್ಣಪ್ಪು ಮನೆಯಲ್ಲಿ 

ಹಿಂದಿನ ರಾತ್ರಿ ಸಿರಿಲನ ಮಾತನ್ನು ಕೇಳಿಸಿಕೊಂಡು ಮನೆಗೆ ಬಂಡ ಸಣ್ಣಪ್ಪುಗೆ ನಿದ್ರೆಯೇ ಬರಲಿಲ್ಲ. ಹೆಂಡತಿಯನ್ನು ಎಬ್ಬಿಸದೆ ತಾನೇ ಕಾಫಿ ಮಾಡಿಕೊಂಡು ಬೆಳಗ್ಗೆ ನಾಲ್ಕೂವರೆ ಗಂಟೆಗೆ ಇತ್ತಲ ಬಳಿ ಹೋದನು. ದೂರದಲ್ಲಿ ಯಾರೋ ಟಾರ್ಚ್ ಲೈಟನ್ನು ಹಿಡಿದುಕೊಂಡು ನಿಂತಂತಿತ್ತು. 

ಸಣ್ಣಪ್ಪು ಹತ್ತಿರ ಹೋಗಿ ಯಾರದು ಎಂದು ಕೇಳಲು?

ಸಣ್ಣಪ್ಪು ಹತ್ತಿರ ಹೋಗಿ ಯಾರದು ಎಂದು ಕೇಳಲು?

ಕತ್ತಲ ಧ್ವನಿ:   ಹೆದರಬೇಡ ತಂಬಿ.. ನಾನು ರಂಗಸಾಮಿ

ಸಣ್ಣಪ್ಪು:  ಹಾಂ ಯಾವ್ ರಂಗಸಾಮಿ?  ಇಷ್ಟೊತ್ತಲ್ಲಿ ಇಲ್ಲೇನು ಮಾಡ್ತಾ ಇದ್ದೀಯ. 

ರಂಗಸಾಮಿ:   ಇಲ್ಲ ಇಂಗೆ ಬಂದೆ ತಂಬಿ ಸ್ವಲ್ಪ ಕೆಲಸ ಇತ್ತು. 

ಸಣ್ಣಪ್ಪು: ಮೆಣಸು, ಕಾಪಿ ಕದಿಯೋಕೆ ಬಂದ್ದಿದ್ಯಾ ಏನು?

ರಂಗಸಾಮಿ: (ಹತ್ತಿರಕ್ಕೆ ಬಂದು) ತಂಬಿ, ಏನ್ ಮಾತಾಡ್ತಾ ಇದ್ದೀರಾ.. ನನ್ನ ಗುರುತು ಸಿಗಲಿಲ್ವೆ?

ಸಣ್ಣಪ್ಪು:  ಓ ನೀನಾ… ಮೊದಲೇ ಈ ಊರಿನಲ್ಲಿ ಆನೆ ಕಾಟ. ಎಲ್ಲಾದ್ರೂ ಆನೆ ಕಾಲಿಗೆ ಸಿಕ್ಕಾಕೊಂಡು ಹೆಚ್ಚು ಕಮ್ಮಿ ಆದ್ರೆ ಏನ್ ಮಾಡ್ತಿಯ? ಬಾ ಕಾಫಿ ಕುಡ್ಕೊಂಡು ಹೋಗು.. ನೀನೇನು ಧಿಡೀರ್ ಅಂತ ಬಂದಿದೀಯಾ. ಇಷ್ಟು ವರ್ಷ ಎಲ್ಲೋಗಿದ್ದೆ. 

ರಂಗಸಾಮಿ: ಎಲ್ಲಿಗೆ ಅಂತ ಹೋಗ್ಲಿ ಹೇಳು ತಂಬಿ? ಈ ಊರು ಬಿಟ್ಟು ಇಪ್ಪತ್ತು ವರ್ಷ ಆಯಿತು. ನಮ್ಮೂರಿನಲ್ಲಿ ಮಳೆ ಬೆಳೆ ಎಲ್ಲಾನು ಇದೆ. 

ಇಲ್ಲಿ ಈ ಊರಿನಲ್ಲಿ ಭೂತಾಯಿ ಎಷ್ಟು ಸಮೃದ್ಧಿ ಕೊಟ್ಟಿದ್ದಳೋ ಅಷ್ಟೇ ಅಲ್ಲೂ ಕೊಟ್ಟಿದ್ದಾಳೆ. 

ಆದ್ರೆ ನನಿಗೆ ಈ ಊರೇ ಇಷ್ಟ ತಂಬಿ. 

ವಯಸಾಗಿದ್ದು ಕಾಲದಲ್ಲಿ ಇಲ್ಲೇ ಎಲ್ಲಾದ್ರೂ ಐದು ಎಕರೆ ಗದ್ದೆನೋ, ತೋಟನೋ ತೊಗೊಂಡು ಇಲ್ಲೇ ಹೆಂಡತಿ ಮಕ್ಕ್ಳು ಜೊತೆ ಜೀವನ ಮಾಡೋಣ ಅಂತ ಅನ್ಕೊಂಡಿದ್ದೀನಿ. 

 ಸಣ್ಣಪ್ಪು:  ಮತ್ತೆ ನಿನ್ನ ತಮಿಳುನಾಡು ಮನೆ ಏನ್ ಮಾಡ್ತಿಯಾ?

ರಂಗಸಾಮಿ: ನನ್ನ ತಂಗಿ ಸೆಲ್ವಿ ಗಂಡ ತೀರ್ಕೊಂಡು ೬ ತಿಂಗಳು ಆಯ್ತು. ಮೂರು ಹೆಣ್ಣು ಮಕ್ಳು ನ ಕರ್ಕೊಂಡು ತವರು ಮನೆಗೆ ಬಂದಿದ್ದಾಳೆ. 

ಹೆಂಗೋ ಮನೆ ಹಿಂದೆ ಮೂರು ಎಕರೆ ಹೊಲ ಇದೆ ಜೀವನ ನಡುಸ್ತಾಳೆ. 

ಕೋಯಿಲ್ ತಿರುವಿಳಾ ಇಲ್ಲ ಪೊಂಗಲ್ ಹಬ್ಬ ಬಂದಾಗ ಹೋಗಿ ಬರ್ತಿವಿ. 

ರಂಗಸಾಮಿ: ಸರಿ.. ನಿಮ್ಮಿಂದ ಒಂದು ಉಪಕಾರ ಆಗ್ಬೇಕು. 

ಸುತ್ತ ಮುತ್ತ ಯಾರಾದ್ರೂ ಗದ್ದೆ, ತೋಟ ಮಾರೋವ್ರು ಇದ್ರೆ ಸ್ವಲ್ಪ ಹೇಳಿ. 

ನಾನು ತೊಗೊಳ್ತಿನಿ. 

ಸರಿ ನಾನು ಇನ್ನು ಹೋರ್ಡತೀನಿ.  

ಎರಡು ದಿನಗಳ ನಂತರ 

ಬೆಳಿಗ್ಗೆ ಸಿರಿಲ್ ಎದ್ದು ತಿಂಡಿ ತಿಂದು ಕಾಫಿಯ ಕುಡಿಯುತ್ತಿರುವಾಗ ಒಂದು ಫೋನ್ ಬಂತು. 

ಸಿರಿಲ್ : ಹಲೋ ಹಾಂ ಪಣ್ಲೆ ಅಣ್ಣಾ.. (ಹೇಳಿ ಅಣ್ಣ)

ಶಂಕರಣ್ಣ:  ಓಲುಲ್ಲಾ ಮಾರಾಯ. ರಾತ್ರೆ ಒಂಜಿ ಶಿಕಾರಿ ಉಂಡು ಪ್ರೇಮ್ ಗೌಡ್ರೇನ ತೋಟೊಡ್ ( ಪ್ರೇಮ್ ಗೌಡ್ರು ತೋಟದಲ್ಲಿ ಒಂದು ಶಿಕಾರಿ ಇದೆ ರಾತ್ರಿ ಹೋಗೋಣ )

ಸಿರಿಲ್:  ಅಂದಾ… ( ಹೌದಾ )

ಸರಿ ಎಂಕ್ ಚೂರು ಗ್ಯಾರೇಜ್ ಪೋವೊಡು ಯಾನ್ ಬೊಕ್ಕ ಫೋನ್ ಮಲ್ಪೆ ಆವೆ 

 ( ಸರಿ ಸ್ವಲ್ಪ ಗ್ಯಾರೇಜ್ ಅಲ್ಲಿ ಕೆಲಸ ಇದೆ ಅದೆಲ್ಲ ಮುಗ್ಸಿ ನಾನು ನಿಮಿಗೆ ಫೋನ್ ಮಾಡ್ತೀನಿ)

ಶಂಕರಣ್ಣ : ಸರಿ ಓಕೆ ಮಗ ಬೊಕ್ಕ ಮಲ್ಪು ( ಓಕೆ.  ಆಮೇಲೆ ಮಾಡು)

ಸೋಬಿನಾ: ರೀ… 

ಸಿರಿಲ್: ಏನು ರೀ… ಶುರು ಆಯ್ತಾ 

ಸೋಬಿನಾ: ಇಲ್ಲ ನಿಮಿಗೆ ಗೊತ್ತು ನೆನ್ನೆ ಪೊಲೀಸ್ ಸ್ಟೇಷನ್ ಅಲ್ಲಿ… 

ಸಿರಿಲ್: ಶುರು ಆಯ್ತಾ

ಸೋಬಿನಾ: ಏನಾದ್ರೂ ಮಾಡ್ಕೊಳ್ಳಿ ನಾನು ಏನು ಹೇಳೊಲ್ಲ. ಓದೋ ಹುಡುಗನ್ನ ಮತ್ತೆ ಮತ್ತೆ ಪೊಲೀಸ್ ಸ್ಟೇಷನ್ಗೆ ಕರೀತಾ ಇದ್ರೆ ನಾನು ಸುಮ್ನೆ ಇರಲ್ಲ ಇಮ್ಮೆಲೆ ಕಂಪ್ಲೇಟ್ ಕೊಟ್ಟು ಬಿಡ್ತಿನಿ. 

ಸಿರಿಲ್: ನೋಡು ಶಂಕರನ್ನದು ಬಂದೂಕು ಹೋಗೋದು ಅಂತ ಪ್ಲಾನ್ ಆಗಿದೆ ನೀನು ನಿನ್ನ ಕೆಲಸ ನೋಡ್ಕೊಂಡು ಸುಮ್ನೆ ಇದ್ದುಬಿಡು 

ನಿನ್ನ ಸುಕುಮಾರ ಸ್ಕೂಲಿಗೆ ಹೋದ್ನ?

ಸೋಬಿನ : ನನ್ನತ್ರ ಏನು ಕೇಳ್ಬೇಡಿ ನಂಗೇನು ಗೊತ್ತಿಲ್ಲ. 

ಸಂಜೆ ಬೇಗ ಕೆಲಸ ಮುಗಿಸಿಕೊಂಡು ಬಂದು ಸಿರಿಲ್ ಶಿಕಾರಿಗೆ ಹೊರಟ. ಶಂಕರಣ್ಣ ಮತ್ತು ಸಿರಿಲ್ ಇಡೀ ತೋಟವನ್ನು ಅಡ್ಡಾಡಿಕೊಂಡು ಬಂದು ಕೊನೆಗೆ ಒಂದು ಹಂದಿ ಶಿಕಾರಿ ಮಾಡಿದರು . ಹಂದಿ ಸಿಕ್ಕ ಖುಷಿಯಲ್ಲಿ ಮನೆಗೆ ಹಿಂದೆರಳುತಿಯಿದ್ದಂತೆಯೇ. ಕಾಲು ನಡಿಗೆಯಲ್ಲಿ ಹೋಗುವಾಗ ಶಕಂರಣ್ಣನ ಕಾಲಿಗೆ ಯಾವುದೊ ದೊಡ್ಡ ಪ್ರಾಣಿ ಸಿಕ್ಕಿ ಎಡವಿ ಬಿದ್ದನು. 

ಸಿರಿಲ್, ಶಂಕರ ಮತ್ತೆ ಜೊತೆಗಿದ್ದ ಇನ್ನೆರಡು ಹುಡುಗರು ಸಣ್ಣ ಪ್ರಾಯದವರು. ಅಲ್ಲಿರುವುದು ಪ್ರಾಣಿ ಅಲ್ಲ ಮನುಷ್ಯ ಎಂದು ತಿಳಿಯುತ್ತಿದ್ದಂತೆ ಅಯ್ಯಯ್ಯೋ ಓಡಿರೋ 

ಒಡ್ರೋ ಯಾಪ್ಪೂ 

ಅಯ್ಯಪ್ಪೋ…. ದೆವ್ವ ದೆವ್ವಾ ಓಡಿರೋ

ಅಂತ ಕಿರುಚಾಡಲು ಶುರು ಮಾಡುತ್ತಿದಂತೆಯೇ. ಸಿರಿಲ್ ಆ ಇಬ್ಬರು ಹುಡುಗರನ್ನು ಸುಮ್ಮನಿರ್ರೋ… ಏನ್ ಕಿರ್ಚಾಡಿ ಸಾಯಿತಿರಾ ಇನ್ನು ಮುಂದೆ ಶಿಕಾರಿಗೇನೆ ಬರಬೇಡಿ ನೀವು ಇಬ್ಬರು ಎನ್ನಲು 

ಆ ಮನುಷ್ಯ ಯಾರು ಎಂದು ಕಂಡು ಹಿಡಿಯಲು ಸ್ವಲ್ಪ ಸಮಯ ಬೇಕಾಯಿತಾದರೂ, ಆತನೇ ಎದ್ದು ಸಿರಿಲ್ ತಂಬಿ, ನಾನಪ್ಪ ರಂಗಸಾಮಿ ಎಂದನು (ರಂಗಸಾಮಿ ಮತ್ತೆ ಊರಿಗೆ ಬಂದಿರುವ ವಿಷಯ ಸ್ವಲ್ಪ ಮಟ್ಟಿಗೆ ಎಲ್ಲರಿಗು ಗೊತ್ತಿತ್ತು)

ಈ ರಾತ್ರೀಲಿ ಇಲ್ಲೇನು ಮಾಡ್ತಾ ಇದ್ದೀರಾ? 

ಏನಿಲ್ಲ.. ನೀನು ಶಿಕಾರಿಗೆ ಹೋಗೋ ವಿಷಾಯ ಗೊತ್ತಾಯ್ತು ಹಾಗೆ ನಿಮ್ ಹಿಂದೆ ಬಂದೆ. 

ಬರ್ತಾ ದಾರಿ ತಪ್ಪೋಯಿತು. ಅದಿಕ್ಕೆ ಈ ಮರದ ಹತ್ತಿರ ಕುತ್ಕೊಂಡುಬಿಟ್ಟೆ 

ಹಂಗೆ ನಿದ್ರೆ ಬಂತು. ಅಲ್ಲ ನಮ್ಮ ಹಿಂದೇನೆ ಬಂದಿದ್ದೀಯಾ ಅಂತ ಇದ್ರೆ, ಒಂದು ಸಲ ನಮ್ಮನ ಕರೆದಿದ್ದರೆ ನಮ್ಮ ಜೊತೇನೆ ಕರ್ಕೊಂಡು ಹೋಗ್ತಾ ಇದ್ದ್ವಿ ಆಲ್ವಾ 

ಇಂತ ರಾತ್ರೀಲಿ ಒಬ್ರೇ ಹೆಂಗೆ ಇಲ್ಲಿ ಮಲ್ಕೋಳೊಕ್ಕೆ ಧೈರ್ಯ ಬಂತೋ. 

ಯಾಕೆ? ನೀವೆಲ್ಲ ಚಿಕ್ಕು ಹುಡುಗರು ಇರುವಾಗ ನಾನು ಇದೆ ತೋಟದಲ್ಲಿ ನಿಮ್ಮಹಾಗೆನೇ ಶಿಕಾರಿ ಮಾಡಿಕೊಂಡು, ಕಿತ್ತಳೆ ತೋಟ ಸಪೋಟ ತೋಟಕ್ಕೆ ಪಾರೆ ಕಾಯಿಕೊಂಡು ಒಬ್ಬೊಬ್ಬನೇ ಇರುತ್ತಾ ಇದ್ದೆ. 

ಈಗ ಏನು ಅಂದ್ರೆ ಆನೆ ಕಾಟ ಅಷ್ಟೇ ಅದೆಕ್ಕೆಲ್ಲ ಹೆದರಿಕೊಳ್ಳೋ ರಂಗಸಾಮಿ ಅಲ್ವೇ ಅಲ್ಲ. 

ಸರಿ ಬನ್ನಿ ಹೊರಡೋಣ, ತುಂಬಾ ದಿನ ಆದಮೇಲೆ ಒಳ್ಳೆ ಕಾಡುಹಂದಿ ಸಿಕ್ಕಿದೆ ಇನ್ನು ಇದನ್ನ ಕ್ಲೀನ್ ಮಾಡೊ ಕೆಲಸ ಇದೆ.  ಕ್ಲೀನ್ ಮಾಡಿ ಹಂಚ್ಕೊಳೋಣ.

ಮರು ದಿವಸ ಸಿರಿಲ್, ಸಣ್ಣಪ್ಪುಗೆ ಫೋನ್ ಮಾಡಿ ನೆನ್ನೆ ಶಿಕಾರಿಲಿ ಮಾಲ್ ಸಿಕ್ಕಿದೆ. ಹೆಂಡತಿಗೆ ಹೇಳಿದೀನಿ ಒಳ್ಳೆ ಅಡುಗೆ ಮಾಡೋಕ್ಕೆ. ಸಂಜೆ ಪಾರ್ಟಿ ಮಾಡೋಣ ಅಂತ ಹೇಳಿದ. 

ಸಂಜೆ ಪಾರ್ಟಿಗೆ, ಸಣ್ಣಪ್ಪು, ಶಂಕರಣ್ಣ, ಸುರೇಂದ್ರ, ಸಂಜೀವ ಬಂದಿದ್ದರು ಕುಡಿಯಲು ಬೇಕಾದ ಅವರವರ ಇಷ್ಟದ ವಿಸ್ಕಿಯನ್ನು ತರಿಸಿದರು. ಸುರೇಂದ್ರ, ಸಂಜೀವ ದಾರಿಯಲ್ಲಿ ಒಂಟಿಯಾಗಿ ಅಲೆಯುತ್ತಿದ್ದ ರಂಗಸಾಮಿಯನ್ನು ಕೂಡ ಜೊತೆಗೆ ಕರೆದುಕೊಂಡು ಬಂದಿದ್ದರು  

ರಂಗಸಾಮಿ: ತಂಬಿ, ಮೊನ್ನೆ ಜಾಗದ್ದು ವಿಷಯ ಹೇಳಿದ್ನಲ್ಲ. ಏನು ಮಾಡಿದ್ರಿ?

ಸಣ್ಣಪ್ಪು: ಕೇಳಿ ಎರಡು ದಿನ ಆಗಿಲ್ಲ.  ಇರು ಎಲ್ಲಾದ್ರೂ ಏನಾದ್ರೂ ಗೊತ್ತಾದ್ರೆ ಹೇಳ್ತಿನಿ. ನನಿಗೂ ಸ್ವಲ್ಪ ಕಮಿಷನ್ ಕೊಟ್ರೆ ಆಯಿತು. 

ಸಿರಿಲ್: ರಂಗಸಾಮಿ, ಸೇಲಂ ಕಡೆ ಇನ್ನು ಹೋಗದೆ ಇಲ್ವಾ?

ರಂಗಸಾಮಿ: ಸದ್ಯಕ್ಕೆ ಇಲ್ಲ. ವರ್ಷದಲ್ಲಿ ಒಂದ್ ಸಲ ಮಾತ್ರ ಹೋಗಿ ಬರೋಣ ಅಂತ ಇದ್ದೀನಿ. 

ಶಂಕರಣ್ಣ: ನಿಮಿಗೆ ಇಲ್ಲಿ ಆಸ್ತಿ ಕೊಂಡುಕೊಳ್ಳಬೇಕು ಅನ್ನೋ ಆಸೆ ಇದ್ರೆ, ಹಗಲೊತ್ತಲ್ಲಿ ಸುತ್ತಾಡಿ. ರಾತ್ರಿ ಹೊತ್ತಲ್ಲಿ ಯಾರಯಾರದ್ದೊ ತೋಟ ಸುತ್ತಾಡಬೇಡಿ. 

ರಂಗಸಾಮಿ: ನೋಡು ಶಂಕರಣ್ಣ, ನಾ ಸೊನ್ನೆ ಅಲ್ಲೇ, ನೆನ್ನೆ ರಾತ್ರಿ…. (ಎಂದು ರಾಗ ಎಳೆಯುವಾಗ)

ಶಂಕರಣ್ಣ: ಡೆಯ್ಯ್ ಸಾಮಿ.  ಅದಲ್ಲ ಇದ್ರೂ ಮೊದ್ಲು ನೀನು ಕಾಡೆಲ್ಲಾ ಸುತ್ತುತ್ತಾ ಇರೋದು ಕಿವಿಗೆ ಬಿದ್ದಿದೆ ಅದಿಕ್ಕೆ ಹೇಳ್ತಾ ಇರೋದು. ನೀನು ನನಕ್ಕಿಂತ ವಯಸ್ಸಲ್ಲಿ ಹತ್ತು ವರ್ಷ ದೊಡ್ಡವನು ಎಲ್ಲೆಲ್ಲೋ ಆಲ್ದ ಮರದತ್ರ ಬಿದ್ಕೊಳೋದು, ತೋಟ ಕಾಡು ಅಂತ ಸುತ್ತೋದು ನನ್ನ ಕಣ್ಣಿಗೆ ಕಾಣಸಿದ್ರೆ ನಿನ್ನ ನಾನು ಅಲ್ಲೇ ಗುಂಡು ಹೊಡಿತೀನಿ. 

ರಂಗಸಾಮಿ ಕುಡಿದು ಟೈಟ್ ಆದಂತೆ ನಟಿಸಿ. ಅಲ್ಲಿಂದ ಎದ್ದು ಹೋದನು. 

ಶಂಕರಣ್ಣ ಅವನು ಎದ್ದು ಹೋಗುತ್ತಿದ್ದಂತೆಯೇ.. ನಿಮಿಗೆಲ್ಲ ವಿಷಯ ಗೊತ್ತಿದೀಯಾ ಇಲ್ವಾ? ರಂಗಸಾಮಿ ಯಾರು ? ಏನು ಅಂತ? 

ಸಿರಿಲ್, ಸಣ್ಣಪ್ಪು, ಶಂಕರಣ್ಣ ಜೊತೆ ಇದ್ದ ಸುರೇಂದ್ರ  ಮತ್ತು ಸಂಜೀವ ಎಲ್ಲರು ತಮ್ಮ ತಮ್ಮ ಗ್ಲಾಸನ್ನು ಪಕ್ಕಕ್ಕಿಟ್ಟು, ಶಂಕರಣ್ಣನ ಮಾತು ಕೇಳಿಸಿಕೊಳ್ಳಲು ಮೌನವಾದರು. 

ಸಂಜೀವ: ಈ ಮನುಷ್ಯ ಯಾವ ಅಮಾವಾಸ್ಯೆಗೆ ಹುಟ್ಟಿದನೋ ಗೊತ್ತಿಲ್ಲ. ರಾತ್ರೋರಾತ್ರಿ ಎಲ್ಲೆಲ್ಲೋ ಇರ್ತಾನೆ. 

ಶಂಕರಣ್ಣ: ಹೇಯ್ ಸುರೇಂದ್ರ, ಸಂಜೀವ ಸ್ವಲ್ಪ ಸುಮ್ನೆ ಇರ್ರೋ. ನೀವು ಇವನನ್ನ ಇವತ್ತು ನೋಡತಾ ಇದ್ದೀರಾ. 

ಇವ್ನ ಚರಿತ್ರೆ ನಿಮಿಗೆ ಗೊತ್ತಿಲ್ಲ. 

ತುಂಬಾ ವರ್ಷಗಳ ಹಿಂದೆ, ಇವ್ನು ಇಲ್ಲೇ ಒಂದು ತೋಟದಲ್ಲಿ ಪಾರೆ ಕಾಯಿಕೊಂಡು ತೋಟದ ಕೆಲಸ ಮಾಡ್ಕೊಂಡು ಇದ್ದ. ಈಗ ಲಕ್ಷಕ್ಕೆ ಲಕ್ಷ ಕೊಡೊ ಅಷ್ಟು ದುಡ್ಡಿದೆ ಅವ್ನ ಹತ್ರ. ಇಲ್ಲಾಂದ್ರೆ ಸಣ್ಣಪ್ಪುನ ತೋಟ ಹುಡ್ಕೊಡಕ್ಕೆ ಕೇಳ್ತಾ ಇದ್ನಾ..? ಸೇಲಂ ಅಲ್ಲಿ ಒಳ್ಳೆ ಆಸ್ತಿ ಮಾಡಿಕೊಂಡು ಇಲ್ಲಿಗೆ ಯಾಕೆ ಬಂದಿದ್ದನೋ ಗೊತ್ತಿಲ್ಲ. ಅದ್ರಲ್ಲೂ ಗೆಸ್ಟ್ ಹೌಸೆಲ್ಲಿ ಉಳ್ಕೊಂಡಿದ್ದಾನೆ.

ಸಂಜೀವ: ಕಿಡ್ನಾಪ್ ಮಾಡಿದ್ರೆ ಒಳ್ಳೆ ದುಡ್ಡು ಹೆಂಗೆ ಅದೇ ಪ್ಲಾನ್ ಬಗ್ಗೆ ನೀವು ಮಾಡ್ತಾ ಇದ್ದೀರಾ 

ಶಂಕರಣ್ಣ: ತಲೆ ಬುಡ ಇಲ್ದೆ ಮಾತಾಡ್ಬೇಡಾ ನಿಮಿಗೆ ಸಲುಗೆ ಕೊಟ್ರೆ ತಲೆ ಮೇಲೆ ಕುತ್ಕೊಳ್ತೀರಾ. 

ಸುರೇಂದ್ರ : ಅಯ್ಯೋ  ವಿಷ್ಯ ಏನು ಹೇಳಿ 

ಸಿರಿಲನ  ನಿಮ್ಮ ತಂದೆಗೆ  ಮೂಡಿಗೆರೆ ಇಂದ ವಲಸೆ ಬಂದಿದ್ದ ವೆಂಕಣ್ಣ ಪರಿಚಯ ಇತ್ತು ಏನೋ ಯಾವಾಗ್ಲೊ ಆ ಕಾಲದಲ್ಲಿ ಸಂತೆಯಲ್ಲಿ ಸಿಕ್ಕಿದ್ದಾಗ ಲಲಿತಮ್ಮ ಅವರ ತೋಟದಲ್ಲಿ ಕೆಲಸ ಇದೆ ನೀವು ನಮ್ಮೂರಿಗೆ ಬನ್ನಿ ಅಂತ ಕರ್ಕೊಂಡು ಬಂದ್ರು ಆಮೇಲೆ , ಲಲಿತಮ್ಮನವರ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡು ಅವರದ್ದೇ ಲೈನ್ ಮನೆಯಲ್ಲಿ ಹೆಂಡತಿ ಮತ್ತು ಐದು ಮಕ್ಕಳು ವಾಸವಿದ್ದರು. 

ವೆಂಕಣ್ಣನವರ ಎರಡನೇ ಮಗಳು ವನಜಾಕ್ಷಿ ಸುರದ್ರೂಪಿ. ಆಕೆ ವೆಂಕಣ್ಣನವರ ಮಗಳು ಅಂದರೆ ಯಾರು ನಂಬಲ್ಲ. 

ಮೊದಲ ಮಗ ರಾಜು ಮತ್ತೆ ವನಜಾಕ್ಷಿ ಇಬ್ಬರಿಗೂ ವಿದ್ಯಾಭ್ಯಾಸ ಕೊಟ್ಟು ಒಳ್ಳೆಯ ಕೆಲಸ ಮಾಡಿಕೊಂಡು ತಮ್ಮದೇ ಆದ ಸ್ವಂತ ಮನೆಯಲ್ಲಿ ಇರಬೇಕೆನ್ನುವ ಆಸೆ ಇತ್ತು. 

ಹಾಗಾಗಿ ಇಬ್ಬರನ್ನು ಸಿರಿಲಾನ ತಂಗಿಯರ ಜೊತೆ ಮಂಗಳೂರಿನ ಬೋರ್ಡಿಂಗ್ ಶಾಲೆಗೆ ಹಾಕಿದ್ದರು. 

ವನಜಾಕ್ಷಿ, ಸಿರಿಲನ ತಂಗಿಯರಿಗಿಂತ ಹತ್ತು ವರ್ಷ ದೊಡ್ಡವಳು. ಹತ್ತನೇ ತರಗತಿಯವರೆಗೆ ಓದಿ ನಂತರ ಊರಿಗೆ ಬಂದು ತಂದೆಯ ಬಳಿ ಅಪ್ಪ ನಾನು ಇಲ್ಲೇ ಇರುತ್ತೇನೆ ಮತ್ತೆ ಮಂಗಳೂರಿಗೆ ಹೋಗುವುದಿಲ್ಲ. ಇಲ್ಲೇ ಪೇಟೆಗೆ ಹೋಗಿ ಟೈಲೊರಿಂಗ್ ಕಲಿಯುವುದಾಗಿ ಹೇಳಿ ದಿನವೂ ಸಕಲೇಶಪುರ ಪೇಟೆಗೆ ಹೋಗಿ ಬರುತ್ತಿದ್ದಳು. 

ಹೀಗೆ ಒಮ್ಮೆ ವೆಂಕಣ್ಣನವರ ಪತ್ನಿ ಸರಸಮ್ಮ, ಮಗಳನ್ನು ತನ್ನೊಂದಿಗೆ ಕಿತ್ತಳೆ ಹಣ್ಣನ್ನು ತುಂಬಲು ತೋಟದ ಕೆಲಸಕ್ಕೆ ಕರೆದಳು. 

ಆಗ ಈ ರಂಗಸಾಮಿಗೆ ಇಪ್ಪತೈದು ವರ್ಷ. ಹದಿನೇಳು ವರ್ಷದ ವನಜಾಕ್ಷಿಯನ್ನು ನೋಡುತ್ತಿದ್ದಂತೆಯೇ ಇಬ್ಬರಿಗೂ ಸ್ನೇಹವಾಯಿತು. 

ಮಗಳು ತೋಟದ ಕೆಲಸಕ್ಕೆ ಹೋಗುವುದು ವೆಂಕಣ್ಣನವರಿಗೆ ಇಷ್ಟವಿರಲಿಲ್ಲ. ಆದರೆ ವನಜಾಕ್ಷಿ ತಂದೆಯ ಹತ್ತಿರ ಸ್ವಲ್ಪ ತೋಟದ ಕೆಲಸ ಮಾಡಿದರೆ ಸಿಗುವ ಹಣ ಕೂಡಿಟ್ಟು ಪೇಟೆಯಲ್ಲಿ ತನ್ನದೇ ಆದ ಟೈಲೊರ್ ಶಾಪ್ ಇಡಬಹುದು ಎಂದು ಹೇಳಿ ಮನಒಲಿಸಿದ್ದಳು. ವೆಂಕಣ್ಣ ಸರಿ ಎಂದು ಒಪ್ಪಿದನು. 

ದಿನ ದಿನವೂ ಇವರಿಬ್ಬರ ಸ್ನೇಹವು ಪ್ರೀತಿಯಾಗಿ ಮಾರ್ಪಟ್ಟಿತ್ತು. ಒಂದು ದಿನ ವನಜಾಕ್ಷಿ ಹಿಂದಿನ ಬಾಗಿಲ ಬಳಿ ವಾಂತಿ ಮಾಡುತ್ತಿದ್ದಳು. 

ಮೂರು ನಾಲ್ಕು ದಿನ ಈಕೆಯ ತಲೆ ಸುತ್ತು, ವಾಂತಿಯನ್ನು ನೋಡಿದ ತಾಯಿ ಸರಸಮ್ಮ ಆಕೆಯ ಕೈಯನ್ನು ಹಿಡಿದು ದೇವರ ಕೋಣೆಯ ಮುಂದೆ ನಿಂತು ಆಣೆ  ಮಾಡಿ ಸತ್ಯ ಹೇಳಲು ಹೇಳಿದಳು. ಯಾರಿದಕ್ಕೆಲ್ಲ ಕಾರಣ ಎಂದು ಕೇಳಲು. 

ವನಜಾಕ್ಷಿ ಏನು ಹೇಳಿದಳೋ ಯಾರಿಗೆ ಗೊತ್ತು, ರಂಗಸಾಮಿ ಅಂತಾನೆ ಹೇಳಿರಬೇಕು  

ಅವತ್ತು ಗುರುವಾರ, ಸಂತೆಗೆ ಹೋಗಿದ್ದ ವೆಂಕಣ್ಣ ಬಾಗಿಲ ಹತ್ತಿರ ನಿಂತು ವಿಷಯವನ್ನು ಕೇಳಿ ಸಿಟ್ಟಿನಿಂದ ಮನೆಯ ಹೊರಗಡೆ ನಾಯಿ ಗೂಡಿನ ಹತ್ತಿರ ಇದ್ದ ಇಟ್ಟಿಗೆಯಿಂದ ವನಜಾಕ್ಷಿಯ ತಲೆಯ ಮೇಲೆ ಹೊಡೆದನು. ಹೊಡೆದೇಟಿಗೆ ತಲೆಯಿಂದ ರಕ್ತ ಹರಿದುಬಂತು, ಸರಸಮ್ಮ ಗಲಾಟೆಯನ್ನು ತಡೆಯಲು ಮುಂದೊದಳು. ವನಜಾಕ್ಷಿ ಹಿಂದಿನ ಬಾಗಿಲಿನಿಂದ ಮನೆಯಿಂದ ಹೊರಗೆ ಹೋದಳು. 

ವನಜಾಕ್ಷಿ ರಾತ್ರಿಯೆಲ್ಲ ಮನೆಗೆ ಬರಲಿಲ್ಲ. ಮರು ದಿವಸ ಮಧ್ಯಾಹ್ನ ವರೆಗೆ ಕಾದರು ವನಜಾಕ್ಷಿ ಬಾರದ್ದನ್ನು ತಿಳಿದು ವೆಂಕಣ್ಣ ಇನ್ನು ಮುಂದೆ ಅವಳು ನನ್ನ ಪಾಲಿಗೆ ಸತ್ತಳು. 

ಕಿತ್ತಳೆ ತೋಟದ ಪಾರೆಗಾರ ರಂಗಸಾಮಿ ಕೂಡ ಊರಲ್ಲಿ ಇರಲಿಲ್ಲ ಎಂದು ತಿಳಿಯಿತು. ಊರವರು ಯಾರು ಕೇಳಿದರು ಆಕೆ ಮಂಗಳೂರಿಗೆ ಹೋಗಿದ್ದಾಳೆ ಎಂದು ಹೇಳು ಎಂದು ಸರಸಮ್ಮನ ಹತ್ತಿರ ಹೇಳಿ, ಕಾಫಿ ತೋಟದ ಸ್ಪ್ರಿಂಕ್ಲರ್ ಕೆಲಸಕ್ಕೆ ಹೋದರು. ಸಂಜೆಯಾಗುತ್ತಿದ್ದಂತೆ, ಕೆರೆಯಿಂದ ಪೈಪಿನಲ್ಲಿ ನೀನು ಬಾರದೆ ಇದ್ದದನ್ನು ನೋಡಿ ತೋಟದ ಕೆಲಸದವರು ಪೈಪ್ಗಳು ಎಲ್ಲಾದರೂ ಬಿಟ್ಟು ಕೊಂಡಿದವೆಯೇ? ಎಂದು ನೋಡಲು ಹುಡುಗರು ಹೋದರು. 

ಕೆರೆಯ ಹತ್ತಿರ ಹೋದಾಗ ಅಲ್ಲಿ ಒಂದು ಶವ ಬಿದ್ದಿತ್ತು. ಅದು ಯಾರದ್ದು ಅಲ್ಲ, ವನಜಾಕ್ಷಿಯದು. 

ಆಗಿನ ಕಾಲಕ್ಕೆ ಪೊಲೀಸ್ ಅಷ್ಟೇನೂ ವಿಚಾರಿಸಲಿಲ್ಲ ಸುಯಿಸೈಡ್ ಅಂತ ಹೇಳಿ ಕೇಸ್ ಕ್ಲೋಸ್ ಮಾಡಿದರು. ಹೆಣ ನೋಡಿದವರೆಲ್ಲ ಸ್ವಲ್ಪ ಜನ  ಯಾರೋ ತಲೆಗೆ ಹೊಡೆದಿದ್ದಾರೆ ಅಂತ ಮಾತಾಡ್ತಾ ಇದ್ದರು. ಇನ್ನೊಂದು ಸ್ವಲ್ಪ ಜನ ಇಲ್ಲ ಕೆರೆಗೆ ಹಾರುವಾಗ ಯಾವ್ದೋ ಕಲ್ಲು ತಾಗಿರಬೇಕು ಅಂತ ಸುದ್ದಿ ಮಾಡಿದ್ರು. ಇನ್ನು ಸ್ವಲ್ಪ ಜನ ರಂಗಸಾಮಿನ್ ಇದೆಲ್ಲ ಮಾಡಿ ಓಡೋಗಿದಾನೆ ಅಂತ ಹೇಳಿದ್ರು.. ಆದ್ರೆ ವೆಂಕಣ್ಣ ಕುಟುಂಬದವರಿಗೆ  ಎಸ್ಟೇಟ್ ಓನರ್ ಲಲಿತಮ್ಮನವರ ಸಹಾಯವಿತ್ತು. ದೊಡ್ಡ ಮಗ ರಾಜುವಿನ ಕಾಲೇಜ್ ಫೀಸ್ ಎಲ್ಲ ಅವ್ರೆ ಕೊಟ್ಟಿದ್ರು. ಊರಲ್ಲಿ ಸುಮಾರು ಅರ್ಧದಷ್ಟು ಮನೆಯವರು ಲಲಿತಮ್ಮ ಅವರ ಎಸ್ಟೇಟ್ಗೆ ಕೆಲಸಕ್ಕೆ ಹೋಗುತ್ತ ಇದ್ದಿದ್ರಲ್ಲ ಅದಿಕ್ಕೆ ಯಾರು ವನಜಾಕ್ಷಿ ಮೇಲೆ ಅಷ್ಟು ಚರ್ಚೆ ಮಾಡ್ತಾ ಇರ್ಲಿಲ್ಲ

ಈ ರಂಗಸಾಮಿ ಅವಾಗ ಊರು ಬಿಟ್ಟು ಹೊಡಿ ಹೋದವನು ಈಗ ಊರಿಗೆ ಯಾಕೆ ಬಂದಿದ್ದಾನೆ ಎಂದು ಗೊತ್ತಿಲ್ಲ. 

ಎಲ್ಲರೂ: ಇಷ್ಟೊಂದೆಲ್ಲಾ ನಡೆದ್ದಿಯಾ!

ಶಂಕರಣ್ಣ: ಹೌದು. ಏನಾದರೂ ಇರಲಿ. ಈ ರಂಗಸಾಮಿ ಮೇಲೆ ಒಂದು ಕಣ್ಣು ಇಟ್ಟಿರಿ. 

ಸರಿ ಎಂದು ಎಲ್ಲರು ತಮ್ಮತಮ್ಮ ಮನೆಗೆ ಹೋದರು. 

ಇದೆಲ್ಲ ನಡೆದು ಒಂದು ವಾರ ಆಗುತ್ತಿದ್ದಂತೆಯೇ 

ಪ್ರೇಮ್ ಗೌಡರ ತೋಟದಲ್ಲಿ ವಿಚಿತ್ರವಾದ ಸಂಗತಿಗಳು ನಡೆಯಲು ಆರಂಭಿಸಿದವು. ಕಾಫಿ ತೋಟದ ಬಡ್ಡೆಗಳಲ್ಲಿ ರಕ್ತವರ್ಣದ ನಿಂಬೆ ಹಣ್ಣುಗಳು. ಕೋಳಿಯ ಪುಕ್ಕಗಳು ಹಾಗು ತಾರಾ ತರಹದ ನೂಲಿನಲ್ಲಿ ಮಾಂತ್ರಿಸಿ ಕಟ್ಟಿಟ್ಟ ಉಂಡೆಗಳು ಎಲ್ಲವು ಅಲ್ಲಲಿ ಕಾಣಲು ಶುರುವಾಯಿತು. ದೈನಂದಿನ ತೋಟದ ಕೆಲಸಕ್ಕೆ ಹೋಗುತ್ತಿದ್ದವರೆಲ್ಲ ಹೆದರಿ ಬರುವುದಿಲ್ಲವೆಂದು ಬೇರೆ ಎಸ್ಟೇಟ್ಗಳಲ್ಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ವಿಷಯ ತಿಳಿಯುತ್ತಿದ್ದಂತೆ ಪ್ರೇಮ್ ಗೌಡರು ಏನೇನು ಪೂಜೆ ಮಾಡಿದರು ಅದಕ್ಕೆ ಸರಿಯಾದಂತ ಪರಿಹಾರ ದೊರಕಲಿಲ್ಲ (ಮುಂದುವೆರೆಯುವುದು)

Leave feedback about this

  • Quality
  • Price
  • Service
Choose Image