Whispers of My World

ಹೃದಯ ಬಡಿತದ ಕ್ಷಣಗಳು: ನನ್ನ ಜೀವನದ ಭಯಾನಕ ದಿನ

ಆಗಸ್ಟ್ 14, 2018 ರಂದು, ನನ್ನ ಶಾಲೆಯ ಪ್ರಾಂಶುಪಾಲರು ನನ್ನನ್ನು ಮಂಗಳೂರಿನಿಂದ ಪಾಲಕ್ಕಾಡ್‌ಗೆ ಕರೆದರು. ನಾನು ಬೇಗನೆ ತತ್ಕಾಲ್ ರೈಲು ಟಿಕೆಟ್ ಬುಕ್ ಮಾಡಿ ರಾತ್ರಿ 10.20 ಕ್ಕೆ ಪಾಲಕ್ಕಾಡ್‌ಗೆ ರೈಲು ಹತ್ತಿದೆ. ಆಶ್ಚರ್ಯವೆಂದರೆ ಮರುದಿವಸ ರೈಲು ನಿರೀಕ್ಷೆಗಿಂತ ಮೊದಲೇ ಪಾಲಕ್ಕಾಡ್ ತಲುಪಿತು, ಸುಮಾರು ಮುಂಜಾನೆ 5.30  ಮಳೆ ಜೋರಾಗಿ ಸುರಿಯುತ್ತಿತ್ತು ಮತ್ತು ಹೊರಗೆ ಇನ್ನೂ ಕತ್ತಲೆಯಾಗಿತ್ತು. ನಾನು ರೈಲ್ವೆ ಸ್ಟೇಷನ್ನಿಂದ ಹೊರಗೆ  ಕಾಲಿಡುವ ಮೊದಲು ಸ್ವಲ್ಪವಾದರೂ ಬೆಳಕಾಗಲಿ ಇಂದು  ತಾಳ್ಮೆಯಿಂದ ಕಾಯುತ್ತಿದ್ದೆ.

ಅದು ನಾನು ನನ್ನ ಕಾಲೇಜು ಮುಗಿಸಿದ ನಂತರ, ಕೆಲಸ ಮಾಡಲು ಪ್ರಾರಂಭಿಸುವ ಸಮಯ. 

ಸ್ವಲ್ಪ ಒತ್ತಾಯದಿಂದಲೂ, ಹಾಗು ಮನೆಯ ಸಂಕಷ್ಟವನ್ನು ಅರಿತು ದುಡಿದು ಅಮ್ಮನಿಗೆ ನೆರೆವಾಗುವ ದೃಷ್ಟಿನಿಂದಲೂ ಬೇಗ ಕೆಲ್ಸಕ್ಕೆ ಸೇರಬೇಕಾಯಿತು. ನಾನು ತುಂಬಾ ಪ್ರೈವೇಟ್  ವ್ಯಕ್ತಿ ಮತ್ತು  ವೃತ್ತಿ ಸಲಹೆ, ಅಥವಾ ಉದ್ಯೋಗದ ಆಯ್ಕೆಗಳ ಸಲುವಾಗಿ  ಇತರರನ್ನು ಕೇಳಲು ಎಂದಿಗೂ ಧೈರ್ಯ ಮಾಡದ ಕಾರಣ ಮುಂದೆ ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. 

ಕಾಲೇಜಿನ ಕೊನೆಯ ಎರಡು ವರ್ಷಗಳಲ್ಲಿ ನಾನು ಮಂಗಳೂರಿನಲ್ಲಿ ಪಾರ್ಟ್ ಟೈಮ್ ಜಾಬ್ ಕೆಲಸಕ್ಕಾಗಿ ಹುಡುಕುತ್ತಿದ್ದೆ. ನಾನು ಡೇಟಾ ಎಂಟ್ರಿ ಮತ್ತು ಬ್ಯಾಕ್-ಆಫೀಸ್ ಕೆಲಸದ ಅಪ್ಲಿಕೇಶನ್‌ಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತುತ್ತಿದ್ದೆ ಆದರೆ ಇಂತಹ ಕೆಲಸಗಳಿಗೆ ರೆಜಿಸ್ಟ್ರೇಷನ್ ಫೀಸ್ ಕಟ್ಟಬೇಕಾಗುತಿತ್ತು. ಅದನ್ನು ಕಟ್ಟಲು ಸಹ ನನ್ನ ಬಳಿ ಹಣ ಇರಬೇಕಲ್ವಾ. 

ಹೇಗೋ  ನಾನು ಏರ್‌ಟೆಲ್, ಸ್ಯಾಮ್‌ಸಂಗ್ ಮತ್ತು ಜಿಯೋದಂತಹ ಕೆಲವು ಪ್ರಸಿದ್ಧ ಸ್ಟೋರ್‌ಗಳಲ್ಲಿ ಪಾರ್ಟ್ ಟೈಂಆಗಿ ಕೆಲಸವೊಂದು ಸಿಕ್ಕಿತ್ತು. ಕಾಲೇಜು ಮುಗಿದ ನಂತರ, ನಾನು ನನ್ನ  ಉಡುಪನ್ನು ಬದಲಾಯಿಸಿಕೊಂಡು ಮತ್ತು ನನ್ನ ದೈನಂದಿನ ಕೊಟ್ಟಿರುವ ಕೆಲಸವನ್ನು ಮಾಡಲು ಸ್ಟೋರ್ ಗಳಿಗೆ  ಹೋಗುತ್ತಿದ್ದೆ. ಅಲ್ಲಿರುವ ಬಿಲ್‌ಗಳು, ಕಿಯೋಸ್ಕ್‌ಗಳು, ಗ್ರಾಹಕರ ಫಾರ್ಮ್‌ಗಳು, ಸಿಮ್ ಕಾರ್ಡ್‌ಗಳು, ಡಾಂಗಲ್‌ಗಳು ಮತ್ತು Apple ಟ್ಯಾಬ್‌ಗಳು, ಕ್ಯಾಮೆರಾಗಳುನ್ನು  ಮತ್ತು ವಿಶೇಷ ಕೊಡುಗೆಗಳೊಂದಿಗೆ ಹೊಸ ಫೋನ್‌ಗಳಂತಹ ವಿವಿಧ ಗ್ರಾಹಕ-ಆಧಾರಿತ ಸಾಧನಗಳ ಮೂಲಕ ನಾನು ಅವರ ಅಂಗಡಿಯ ನಿಖರತೆಯನ್ನು ಪರಿಶೀಲಿಸಿ ನನ್ನ ಮ್ಯಾನೇಜರ್ ಅವರಿಗೆ ರಿಪೋರ್ಟ್ ಬರಿದು ಕಳುಹಿಸುತಿದ್ದೆ. 

ಈ ಕೆಲಸವು ಪ್ರತಿದಿನ ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು . ನಾನು ಈ ಕೆಲಸವನ್ನು ಮಾಡುವುದು ನನ್ನ ತಾಯಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಯಾಕೆಂದರೆ ನನ್ನ ಶೈಕ್ಷಣಿಕ ಸಾಧನೆ, ಓದುವುದರಲ್ಲಿ ಸ್ವಲ್ಪ ಹಿಂದೆ ಇದ್ದೆ. ಈ ಕಾರಣ ನಾನು ನನ್ನ ಅಧ್ಯಯನದ ಮೇಲೆ ಮಾತ್ರ ಗಮನ ಹರಿಸಬೇಕು ಮತ್ತೆ ಅದೇ ನನಗೆ ಮುಖ್ಯ ಎಂದು ನನ್ನ ಈ ಪಾರ್ಟ್ ಟೈಮ್ ಜೋಬಿಗೆ ಅದರಲ್ಲಿ ಸಿಗುವ ದುಡ್ಡಿಗೆ ನನ್ನ ತಾಯಿ ಯಾವ ಆಸಕ್ತಿಯನ್ನು ತೋರಿಸಿರಲಿಲ್ಲ. 

ನನ್ನ ಅಮ್ಮ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ.  ಮತ್ತು ಅವರು ತಮ್ಮ ಬಾಲ್ಯದಿಂದಲೂ ಕಾನ್ವೆಂಟ್ (ಧರ್ಮಭಗಿನಿ) ಸಿಸ್ಟರ್ಸನೊಂದಿಗೆ ಬೆಳೆದದ್ದು ಹಾಗಗಿ ಅವರು ಒಂದು  ಅಂತರರಾಷ್ಟ್ರೀಯ ಶಾಲೆಯಲ್ಲಿ  ಮಧ್ಯಾಹ್ನದ ಊಟದ ಅಡುಗೆಯ ಕೆಲಸವನ್ನು ಮಾಡುತಿದ್ದರು.ಹೀಗೆ ಕೆಲವು ಪರಿಚಯವಿರುವ ವ್ಯಕ್ತಿಗಳು ಖುದ್ದಾಗಿ ನನ್ನ ಅಮ್ಮನನ್ನು ಕರೆದು ಸಿಹಿ ತಿನಿಸುಗಳನ್ನು ಮಾಡಿ ಅವುಗಳನ್ನು ಪ್ಯಾಕ್ ಮಾಡುವುದು,  ಹೊರದೇಶದಲ್ಲಿರುವ ಕೆಲ ಶ್ರೀಮಂತರ ಮಕ್ಕಳು ರಜೆಗೆ ಬಂದಾಗ ಅವರಿಗೆ ವಿಶೇಷ ಅಡುಗೆಗಳನ್ನು ಮಾಡಿಕೊಡಲು ನನ್ನ ಅಮ್ಮನನ್ನು ಎರಡು- ಮೂರು ದಿನಗಳಿಗೆ ಕರೆಸಿ  ಅವುಗಳನ್ನುಮಾಡಿಸುತ್ತಿದ್ದರು. 

ಆಕೆ ಇದೆಲ್ಲವನ್ನು  ದಣಿವರಿಯಿದೆ  ಕೆಲಸ  ಮಾಡಿರುವುದು ನನ್ನ ಸಲುವಾಗಿ, ನನ್ನ ಮುಂದಿನ ಜೀವನಕ್ಕಾಗಿ. 

ಹಾಗೆ ಒಮ್ಮೆ ಕ್ಯಾಲಿಕಟ್‌ನಿಂದ ನನ್ನ ಅಮ್ಮನಿಗೆ ಪರಿಚಯವಿರುವ ಒಬ್ಬ ಉದ್ಯಮಿ  ತಮ್ಮ ಕಂಪನಿಯ ವಿಸ್ತರಣೆಗಾಗಿ ತಮ್ಮ ಕುಟುಂಬದೊಂದಿಗೆ ಮಂಗಳೂರಿಗೆ ಬಂದು ಇಲ್ಲಿಯೇ ಮನೆಯನ್ನು ಕೊಂಡುಕೊಂಡು ಇಬ್ಬರು ಮಕ್ಕಳೊಂದಿಗೆ ಇದ್ದರು. ದೊಡ್ಡವಳು ಊಟಿಯಲ್ಲಿ ಓದುತ್ತಿದ್ದಳು  ಮತ್ತು ಇನ್ನೊಬ್ಬ ಚಿಕ್ಕ ಹುಡುಗ  ಮಂಗಳೂರಿನಲ್ಲಿಯೇ ಪ್ರಸಿದ್ಧ ICSE  ಶಾಲೆಗೆ  ಹೋಗುತಿದ್ದನು. 

ಅದೃಷ್ಟವೋ  ಏನೋ  ಒಂದು ದಿನ ಈ ಬಾಲಕನ ತಾಯಿ ತನ್ನ ಮಗನಿಗೆ ತಮ್ಮ ಮನೆಯಲ್ಲಿ ಕಲಿಸಲು tutor ಟ್ಯುಟೋರ್ ನನ್ನ  ಹುಡುಕುತ್ತಿದ್ದಾಗ ಸುವರ್ಣಾವಕಾಶವಾಗಿ, ನನ್ನನು ಕೇಳಿದರು  ನಾನು ಸಂತೋಷದಿಂದ ಅವಕಾಶವನ್ನು ಒಪ್ಪಿಕೊಂಡೆ.

ತುಂಬಾ ಆಸಕ್ತಿ,  ಶ್ರದ್ದೆಯಿಂದ, ಆತನಿಗೆ ವಿಜ್ಞಾನ, ಗಣಿತ, ಮತ್ತು ಕನ್ನಡ ಪಾಠಗಳನ್ನು ಕಲಿಸುತ್ತಿದ್ದೆ. ಆಗ ನನ್ನ ತಿಂಗಳ ಸಂಬಳ 1500 ರೂಪಾಯಿಗಳು. 4 ರಿಂದ 5 ತಿಂಗಳುಗಳ ಕಾಲ ಕೆಲಸ ಮಾಡಿದೆ. ಅದೇನೋ ನನಗೆ ಆಗಾಗಲೇ ಟೀಚರ್ ಆಗಿಬಿಡುವಾ ಅಂತ ಅನ್ನಿಸುತ್ತಾ ಇತ್ತು. ನನ್ನ ಫೈನಲ್ ಎಕ್ಸಾಮ್ ನಂತರ ಟ್ಯೂಷನ್ ಕೊಡುವುದನ್ನು ನಿಲ್ಲಿಸಿ ನನ್ನ ಮುಂದಿನ ಭವಿಷ್ಯದ ಬಗ್ಗೆ ಬಹಳವಾಗಿ ಯೋಚಿಸ ತೊಡಗಿದೆ. 

ನಾನು ಮಂಗಳೂರು ಅಥವಾ ಬೆಂಗಳೂರಿನಲ್ಲಿ ಕೆಲಸ ಮಾಡಬೇಕೋ ಎಂದು ಯೋಚಿಸುತ್ತಿದ್ದೆ ಆದರೆ ಅದು ಯಾವುದೂ ಸರಿಯಾಗಿ ಹೊಂದಿಕೆಯಾಗುತ್ತಿರಲಿಲ್ಲ. ಎಲ್ಲಿಗೆ ಹೋಗಬೇಕು ಮತ್ತು ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ನನಗೆ ಸರಿಯಾದ ಮಾರ್ಗದಶನ ಕೊಡುವವರು ಯಾರು ಇರಲಿಲ್ಲ. 

ಒಮ್ಮೆ ಮಂಗಳೂರಿನಲ್ಲಿ ಇಂಟರ್ವ್ಯೂಗೆ  ಕರೆ ಮಾಡಿದ್ದರು. ಕೆಲಸವೇನೋ ಇಷ್ಟವಾಗಿದ್ದರು, ಸಂಬಳ ಕಮ್ಮಿ ಇತ್ತು.  ಕೂಲಂಕುಷವಾಗಿ ಯೋಚಿಸಿ ಬೇಡ ತಿರಸ್ಕರಿಸಿದೆ. 

ನಮ್ಮೊಂದಿಗೆ ವಾಸಿಸುತ್ತಿದ್ದ ನನ್ನ ಸೋದರಸಂಬಂಧಿ (cousin) ಪಿಂಕುವಿಗೆ ಕೇರಳದ ಒಂದು  ಶಿಕ್ಷಣ ಕೇಂದ್ರದಲ್ಲಿ ಟೀಚರ್ ಆಗಿ  ಕೆಲಸ ಸಿಕ್ಕಿತು. ಒಂದು ವಾರದ ನಂತರ, ಅದೇ ಸಂಸ್ಥೆಯೊಂದಿಗೆ ಇಂಟರ್ವ್ಯೂ ಕೊಡು ಎಂದು ನನಗೆ ಪ್ರೋತ್ಸಾಹಿಸಿದಳು. 

ನಾನು ಅತ್ಯುತ್ತಮವಾಗಿ ಇಂಟರ್ವ್ಯೂ ಕೊಟ್ಟೆ ಮತ್ತು ನನಗೂ  ಕೂಡ ಅವಳಂತೆಯೇ ಟೀಚರ್ ಆಗಿ ಬೇರೆ ಕಾನ್ವೆಂಟ್  ಸಂಸ್ಥೆಯಲ್ಲಿ ಕೆಲಸ ಸಿಕ್ಕಿತ್ತು ನನ್ನ ಟ್ರೈನಿಂಗ್ ಪೂರ್ಣಗೊಳಿಸಿದ ನಂತರ, ಪಾಲಕ್ಕಾಡ್‌ನ ಒಂದು ಶಾಲೆಯಲ್ಲಿ ಕೆಲಸ ಮಾಡುವ ಅವಕಾಶವ ದೊರೆಯಿತು. ಇದು ನನ್ನ ವೃತ್ತಿಜೀವನದ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಎಂದು ಭಾವಿಸಿದೆ ಮತ್ತು ಪಾಲಕ್ಕಾಡ್‌ನಲ್ಲಿ ಈ ಹೊಸ ಪ್ರಯಾಣವನ್ನು ಸ್ವೀಕರಿಸಲು ನಾನು ಉತ್ಸುಕಳಾದೆ.

ಪಾಲಕ್ಕಾಡ್ ನಾನು ನೋಡಿದ ಅದ್ಭುತ ಸ್ಥಳಗಳಲ್ಲಿ ಒಂದು. ಇದು ದೊಡ್ಡ ನಗರವಾಗಿಯೋ ಅಥವಾ ದೂರದ ಯಾವೊದೋ ಹಳ್ಳಿಯಂತೆ ಇರಲಿಲ್ಲ, ಒಂದು ಸುವ್ಯವಸ್ಥಿತವುಳ್ಳ  ಪೇಟೆಯಂತೆ . ಎಲ್ಲಿ ನೋಡಿದರೂ ಕಣ್ಣು ಹಾಯಿಸಿದಷ್ಟು ದಟ್ಟ ಹಸಿರಿನಿಂದ ಕೂಡಿ ಮೈಮರೆತು ಹೋಗುವಷ್ಟು  ಮನಮೋಹಕ ಭೂದೃಶ್ಯ ಕಾಣುತಿತ್ತು. 

ಇಲ್ಲಿ  ತಮಿಳು ಮತ್ತು ಮಲಯಾಳಂ ಭಾಷಿಕರು ಬಹುಸಂಖ್ಯೆಯಲ್ಲಿದ್ದಾರೆ. ಬಹಳ ವರ್ಷಗಳ ಹಿಂದೆ  ಪಾಲಕ್ಕಾಡ್ ಕೇರಳದ ಭಾಗವಾಗುವ ಮೊದಲು ತಮಿಳುನಾಡಿನ ಆಳ್ವಿಕೆಗೆ ಒಳಪಟ್ಟಿದ್ದರಿಂದ ಈ ಎರಡೂ ಸಮುದಾಯಗಳಿಂದ ಶ್ರೀಮಂತಕೆಯ, ಸಾಂಸ್ಕೃತಿಕ, ಮತ್ತು ಇತಿಹಾಸ  ಪರಂಪರೆ ಒಂದಕ್ಕೊಂದು  ಹೊಂದಿಕೊಂಡಿದೆ. 

ಪಾಲಕ್ಕಾಡ್‌ನ ಹೃದಯಭಾಗದಲ್ಲಿ ಭವ್ಯವಾದ ಮಲಂಪುಳ ನೀರಿನ ಅಣೆಕಟ್ಟು ಇದೆ.  ಇದು ನನಗೆ ನಿಜವಾದ ಇಷ್ಟವಾಗಿದ್ದ ಸಂಗತಿ ಯಾಕೆಂದರೆ, ನಾನು ಕೆಲಸ ಮಾಡುತಿದ್ದ ನನ್ನ ಶಾಲೆಯ ಹತ್ತಿರದಲ್ಲೆಯೇ ಈ ಮಲಂಪುಳ ಡ್ಯಾಮ್ ಇತ್ತು. ಶಾಲೆಯ ತರಗತಿಯ ಕಿಟಕಿಗಳಿಂದ,  ಎತ್ತ ನೋಡಿದರು ನಂಬಲಾಗದಂತಿರುವ ಪ್ರಕೃತಿ ವಿಸ್ಮಯಗಳು ಸುತ್ತಲೂ  ಎತ್ತರದ ಬಂಡೆಗಳು,  ಮತ್ತು  ಅವುಗಳನ್ನು ರಕ್ಷಿಸಬೇಕೆಂಬುವಂತೆ ದಟ್ಟವಾಗಿ ಬೆಳೆದಿರುವ ಮರಗಳು ಆಕಾಶವನ್ನು ಸ್ಪರ್ಶಿಸಲು ಸ್ಪರ್ಧಿಸುತಿದ್ದಾವೆ ಎಂಬಂತೆ ಕಾಣಿಸುತಿತ್ತು. 

 ಬಾಲ್ಯದಿಂದಲೂ ಸಕಲೇಶಪುರದ ಇಂತಹದ್ದೇ  ವಾತಾವರಣದಲ್ಲಿ ಬೆಳೆದವಳಾಗಿದ್ದ ನನಗೆ , ಈ ಪ್ರಶಾಂತ ಪರಿಸರದ ಸೌಂದರ್ಯ ಮತ್ತೆ ನನಗೆ ನೋಡಲು ಸಿಕ್ಕಿದು ಎಷ್ಟು ಚಂದ ಆಲ್ವಾ ಎಂದೆನಿಸಿಬಿಡುತಿತ್ತು. ನೀವೇ ಹೇಳಿ ಇಂತಹ ಆಕರ್ಷಣೆಯ ಪರಿಸರವನ್ನು ನೋಡಲು, ಅನುಭವಿಸಲು ಯಾರು ತಾನೇ ಇಷ್ಟಪಡುವುದಿಲ್ಲ? 

ಆದೇನೋ , ಈ ಊರು ನನಗೆ ತುಂಬಾ ಇಷ್ಟವಾಗಿದ್ದಾದರೂ  ನನ್ನ ಮುಂದಿನ ದಿನಗಳಲ್ಲಿ ನನಗಿಲ್ಲಿ  ವಿಪತ್ತು ಅಡಗಿದೆ ಎಂದು ನನಗೆ ತಿಳಿದಿರಲಿಲ್ಲ. 

ಆಗ  ಮಾನ್ಸೂನ್ ಕಾಲವಾಗಿತ್ತು, ಸರಳವಾಗಿ ಹೇಳಿದರೆ ಮಳೆಗಾಲ. ನಿರಂತರ ಮಳೆ, ಹೀಗಾಗಿ  ನನ್ನ ಶಾಲೆಯು ಹತ್ತು ದಿನದ ಮಳೆಯ ರಜೆಯನ್ನು ಘೋಷಿಸಿ, ನಮಗೆ ಮನೆಯಲ್ಲೇ ಇರಲು ಅವಕಾಶ ಮಾಡಿಕೊಟ್ಟಿತು. ನಾನು ಹಾಸ್ಟೆಲ್ನಲ್ಲಿ ಇದ್ದು ಮಾಡುವುದಾದರೂ ಏನು ಎಂದು  ಒಂದು ವಾರ ಮನೆಗೆ ಹೋಗಿ ಬರುವ ಎಂದು ಮಂಗಳೂರಿಗೆ ಹಿಂತಿರುಗಲು ನಿರ್ಧರಿಸಿದೆ.

ಆಗಸ್ಟ್ 14, 2018 ರಂದು, ನನ್ನ ಶಾಲೆಯ ಪ್ರಾಂಶುಪಾಲರು ನನ್ನನ್ನು ಮಂಗಳೂರಿನಿಂದ ಪಾಲಕ್ಕಾಡ್‌ಗೆ ಕರೆದರು. ನಾನು ಬೇಗನೆ ತತ್ಕಾಲ್ ರೈಲು ಟಿಕೆಟ್ ಬುಕ್ ಮಾಡಿ ರಾತ್ರಿ 10.20 ಕ್ಕೆ ಪಾಲಕ್ಕಾಡ್‌ಗೆ ರೈಲು ಹತ್ತಿದೆ. ಆಶ್ಚರ್ಯವೆಂದರೆ ಮರುದಿವಸ ರೈಲು ನಿರೀಕ್ಷೆಗಿಂತ ಮೊದಲೇ ಪಾಲಕ್ಕಾಡ್ ತಲುಪಿತು, ಸುಮಾರು ಮುಂಜಾನೆ 5.30  ಮಳೆ ಜೋರಾಗಿ ಸುರಿಯುತ್ತಿತ್ತು ಮತ್ತು ಹೊರಗೆ ಇನ್ನೂ ಕತ್ತಲೆಯಾಗಿತ್ತು. ನಾನು ರೈಲ್ವೆ ಸ್ಟೇಷನ್ನಿಂದ ಹೊರಗೆ  ಕಾಲಿಡುವ ಮೊದಲು ಸ್ವಲ್ಪವಾದರೂ ಬೆಳಕಾಗಲಿ ಇಂದು  ತಾಳ್ಮೆಯಿಂದ ಕಾಯುತ್ತಿದ್ದೆ.

ಸ್ವಲ್ಪ ಬೆಳಕು ಕಾಣಿಕೊಂಡು  ಸೂರ್ಯಉದಯಿಸುತ್ತಿದಂತೆ, ನಾನು ಆಟೋ ಹತ್ತಿ ಹಾಸ್ಟೆಲ್‌ಗೆ ಹೊರಟೆ. ನನ್ನ ಶಾಲೆ ಹಾಸ್ಟೆಲ್ನಿಂದ  20 ಕಿಲೋಮೀಟರ್ ದೂರದಲ್ಲಿತ್ತು. ದಿನವೂ ಎರಡು ಬಸ್ ಹತ್ತಿ ಇಳಿದು ಹೋಗಿ ಬರಬೇಕು. 

ಪಾಲಕ್ಕಾಡ್‌ನಲ್ಲಿ ಕೆಲವೇ ಕೆಲವು ಒಳ್ಳೆಯ ಮಟ್ಟದ ಹಾಸ್ಟೆಲ್‌ಗಳಿದ್ದವು ಮತ್ತು ನಾನು ಉಳಿದುಕೊಂಡಿರುವುದು ಅವುಗಳಲ್ಲಿ ಒಂದಾಗಿತ್ತು. 

ನಾನು  ಆಟೋಯಿಂದ ಇಳಿದು  ಹಾಸ್ಟೆಲ್ ಒಳಗೆ ಹೋಗುತ್ತಿದ್ದಂತೆಯೇ, ಹಾಸ್ಟೆಲ್ ವಾರ್ಡನ್ ನನ್ನನ್ನು ನೋಡಿ  ನನ್ನ ತಿಂಗಳ ರೂಮ್  ಬಾಡಿಗೆಯನ್ನು ಕೇಳಿದರು.

 ನಾನು ಪಾಲಕ್ಕಾಡ್‌ನಿಂದ ಹೊರಟ ದಿನದಿಂದ ರಜೆಯ ಮೇಲೆ ಇದ್ದುದರಿಂದ ಆಕೆಗೆ  ತಕ್ಷಣ ನೀಡಲು ಸಾಧ್ಯವಾಗಲಿಲ್ಲ. ನಾನು ಅವಳಿಗೆ ಪರಿಸ್ಥಿತಿಯನ್ನು ವಿವರಿಸಿ, 2 ಗಂಟೆಗಳ ನಂತರ ATM ನಿಂದ ತಂದು ಕೊಡುವುದಾಗಿ ಹೇಳಿದೆ. ಹೇಗೋ ಅರ್ಥ ಮಾಡಿಕೊಂಡು ಹಾಸ್ಟೆಲ್ ಒಳಗೆ ಬಿಟ್ಟಳು.

ನಾನು ನನ್ನ ರೂಂ ಒಳಗೆ  ಹೋದೆ, ಮತ್ತು ನನ್ನ ರೂಮ್‌ಮೇಟ್ ತಾಜು ಇದ್ದಳು . ನಾನು ನನ್ನ ಬ್ಯಾಗಳನೆಲ್ಲ ಮೂಲೆಯಲ್ಲಿಟ್ಟು,  ಹಾಸಿಗೆಯ ಮೇಲೆ ಹಾಗೆ ಮಲಗಿ ನನ್ನ ಫೋನ್ ನೋಡುತ್ತಿರುವಾಗ  ನಮ್ಮ ಶಾಲೆಯ ಪ್ರಾಂಶುಪಾಲರ ಕೆಲವು ಮೆಸೇಜ್ ಇದ್ದವು. 

“ರೋಶ್ನಿ, ಮಲಂಪುಳ ಅಣೆಕಟ್ಟು ತುಂಬಿ ಹರಿಯುವ ಸಾಧ್ಯತೆ ಇದೆ, ಹಾಗಾಗಿ ನೀವು ಇನ್ನೆರಡು ದಿನ ನಾವು ಶಾಲೆಗೆ ಬರ ಬೇಕಾಗಿರಲಿಲ್ಲ. ಧ್ವಜಾರೋಹಣಕ್ಕೆ ಹತ್ತಿರದ ಶಿಕ್ಷಕರು ಮತ್ತು ಮಕ್ಕಳನ್ನು ಮಾತ್ರ ಕರೆಯಲಾಗಿದೆ. ಎಲ್ಲವು ಸುರಕ್ಷಿತವಾದಾಗ ನಮಗೆ ಮತ್ತೆ ತಿಳಿಸುತ್ತೇನೆ”  ಎಂದು  ವಾಯ್ಸ್ ನೋಟ್ ಕಳುಹಿಸಿದ್ದರು. 

ನಾನು ಪ್ರಾಥಮಿಕ ತರಗತಿಗಳಿಗೆ ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಜ್ಞಾನವನ್ನು ಕಲಿಸಿದ್ದರಿಂದ, ನನಗೆ ಹೆಚ್ಚು ಮಕ್ಕಳಿಗೆ  ಮಾಡ ಬೇಕಾದ ಪಾಠವೇನು ಇರಲಿಲ್ಲ. ಆದರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪೋಷಕರ ವಾಟ್ಸಾಪ್ ಗುಂಪಿನಲ್ಲಿ ತಮ್ಮ ತರಗತಿ ಮಕ್ಕಳ ಕ್ಲಾಸ್ ಟೀಚರ್ ಗಳು  ಸಾಕಷ್ಟು ಮನೆಕೆಲಸವನ್ನು ಕೊಟ್ಟಿದ್ದರು. 

ನಾನು ಬಾಡಿಗೆ ವಿಷಯದ ಬಗ್ಗೆ ತಾಜುಗೆ ಹೇಳಿ ಹಾಗೆಯೇ ಮಲಗಿಬಿಟ್ಟೆ. ಸ್ವಲ್ಪ ನಿದ್ರೆಯ ನಂತರ, ತಾಜು ನನ್ನನ್ನು ಎಬ್ಬಿಸಿದಳು, ಅವಳು  CA ಕೋಚಿಂಗ್ ತರಗತಿಗೆ ಹೊರಡುತ್ತಿದ್ದಳು. ನಮ್ಮ ಹಾಸ್ಟೆಲ್‌ನಿಂದ ಕೇವಲ 5 ರಿಂದ 7 ನಿಮಿಷಗಳ ನಡೆದರೆ ಒಂದು ATM ಇತ್ತು , ಹೊರಗೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದರಿಂದ, ನಾನು ನನ್ನ ಫೋನ್ ಅನ್ನು ಕೋಣೆಯಲ್ಲಿಟ್ಟು ಹತ್ತಿರದ ATM ಗೆ ಹೋದೆವು. 

ನಮ್ಮ ಹಾಸ್ಟೆಲ್ ನಗರದ ಮಧ್ಯಭಾಗದಲ್ಲಿತ್ತು,  ಸುತ್ತಲೂ ಮಹಿಳಾ ಕಾಲೇಜು , ನರ್ಸಿಂಗ್ ಕಾಲೇಜು, ಬಸ್ ನಿಲ್ದಾಣ, ದೈನಂದಿನ ಬೀದಿ ವ್ಯಾಪಾರಿಗಳ ಅಂಗಡಿ, ಬಟ್ಟೆ ಅಂಗಡಿಗಳು, ದಿನಸಿ ಮತ್ತು ಎರಡು ಎಟಿಎಂ ಬೂತ್ ಗಳು ಇದ್ದವು. 

ನಾವು ATM ಗೆ ಹೋಗುವಾಗ, ಬೆಳಿಗ್ಗೆ 9 ಗಂಟೆಗೆ, ಒಬ್ಬ ವ್ಯಕ್ತಿ ತನ್ನ ಫೋನ್‌ ನೋಡಿಕೊಂಡು  ಬೀದಿಯ ಕೊನೆಯಲ್ಲಿ ನಿಂತಿರುವುದನ್ನು ನಾನು ಗಮನಿಸಿದೆ. ನಾನು ಅವನತ್ತ ಹೆಚ್ಚು ಗಮನ ಹರಿಸದೆ ಎಟಿಎಂಗೆ ಹೋದೆ. ತಾಜು ನನ್ನನ್ನು ಅಲ್ಲಿಯೇ ಬಿಟ್ಟು ತನ್ನ ಕೋಚಿಂಗ್ ಕ್ಲಾಸ್‌ಗೆ ಹೊರಟಳು.

ನಾನು 10,000 ರೂಪಾಯಿ ATM ನಿಂದ ತೆಗೆದೆ.  ಅಂದು ನಾನು ಕಪ್ಪು ಕುರ್ತಾವನ್ನು ಧರಿಸಿದ್ದೆ ಮೇಲೆ  ಬಿಳಿ ಹೂವಿನ ಪ್ರಿಂಟ್‌ಗಳು ಮತ್ತು ತೋಳಿನ  ಅಂಚುಗಳಲ್ಲಿ ಪಿಂಕ್ ಬಣ್ಣದ  ಪೈಪಿಂಗ್ ಮಾಡಿದ್ದ ನನ್ನ ಆ ಬಟ್ಟೆಯು. ನನ್ನ ಬಳಿ ಇದ್ದ ಪಿಂಕ್ ಬಣ್ಣದ ಲೆಗ್ಗಿಂಗ್‌ಗಳು ಪ್ಯಾಂಟಿಗೆ  ಚೆನ್ನಾಗಿ ಹೊಂದಿಕೆಯಾಗುತಿತ್ತು  ಮತ್ತು ನನ್ನ ಕುತ್ತಿಗೆಯಲ್ಲಿ ಒಂದು ಚಿನ್ನದ ಸರವಿತ್ತು. ಮಳೆಯ ನೀರಿನಿಂದ  ಬೆಚ್ಚಗಿರಲು ದೊಡ್ಡ ಕೊಡೆ ಮತ್ತು ಶಾಲನ್ನು ಹೊದ್ದುಕೊಂಡು ನಾನು ಮತ್ತೆ ಹಾಸ್ಟೆಲ್‌ಗೆ ಕಡೆ ನಡೆಯತೊಡಗಿದೆ. 

ನಾನು ಈಗ ನನ್ನ ಉಡುಪಿನ ಬಗ್ಗೆ ಏಕೆ ಹೇಳುತ್ತಿದ್ದೇನೆ? ಸರಿ, ಆ ದಿನದಂದು ನಾನು ಹೇಗೆ ಕಾಣಿಸಿಕೊಳ್ಳುತ್ತಿದ್ದೆ ಎಂದು ನೀವು ಚಿತ್ರಿಸಕೊಳ್ಳಬೇಕು ಅದಕ್ಕೆ  ಹೇಳುತ್ತಿದ್ದೇನೆ.

ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನವಾಗಿತ್ತು ಮತ್ತು ಅದು ಇನ್ನೂ ನನ್ನನ್ನುಕೆಲವೊಮ್ಮೆ  ಆಳವಾಗಿ ಕಾಡುತ್ತಿರುತ್ತದೆ . ಅದರ ಬಗ್ಗೆ ಯೋಚಿಸುವಗಲೆಲ್ಲ ನನ್ನ ಬೆನ್ನುಮೂಳೆಯಿಂದ  ನಡುಕವಾಗುತ್ತದೆ. ಮನಸ್ಸು ಖಾಲಿಯಾಗುತ್ತದೆ, ಭಯ ಮತ್ತು ಅಸಹಾಯಕತೆಯ ಭಾವನೆ ಉಂಟಾಗುತ್ತದೆ. ಇಂತಹ ದುರದೃಷ್ಟಕರ ಅಥವಾ ಭಯಾನಕ ದಿನವನ್ನು ಊಹಿಸಲು ಸಹ ನನಗೆ ಸಾಧ್ಯವಿಲ್ಲ.

ಎಟಿಎಂನಿಂದ ಸ್ವಲ್ಪ ಹಣವನ್ನು ತೆಗೆದುಕೊಂಡ ನಂತರ, ನಾನು ನನ್ನ ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದೆ, ಹೀಗಾಗಲೇ ಹೇಳಿದಂತೆ ಕೇವಲ 5 ನಿಮಿಷಗಳ ನಡಿಗೆಯ ದೂರದಲ್ಲಿದ್ದೆ. ಹೀಗೆ ಹೋಗುವಾಗ ಹಾಸ್ಟೆಲ್ ಪಕ್ಕದ ಮನೆಯ ಗೇಟ್ ಬಳಿ ಒಬ್ಬ ವ್ಯಕ್ತಿಯನ್ನು ನೋಡಿದೆ, ಆತ ಅದೇ ವ್ಯಕ್ತಿ ನಾನು ಸ್ವಲ್ಪ ಹೊತ್ತಿನ ಮೊದಲು ನೋಡಿದ್ದವನು. ಆತನನ್ನು ಮತ್ತೊಮ್ಮೆ ನೋಡಿದ ನನಗೆ ಮುಂದೇನು ಆಗಬಹುದು ಎಂದು ತಿಳಿದಿರಲಿಲ್ಲ. 

ಆದರೂ, ನಾನು ನನ್ನ ಹಾಸ್ಟೆಲ್ ಕಡೆಗೆ ನಡೆಯುವುದನ್ನು ಮುಂದುವರೆಸಿ ಎರಡು ಹೆಜ್ಜೆ ಆತನನ್ನು ದಾಟಿ ಮುಂದಿಟ್ಟಿದ್ದೆ ಅಷ್ಟೇ , ಆ ವ್ಯಕ್ತಿ ಇದ್ದಕ್ಕಿದ್ದಂತೆ ಹಿಂದಿನಿಂದ ಬಂದು ನನ್ನನ್ನು ಬಲವಾಗಿ ಹಿಡಿದನು. ಅವನು ನನ್ನ ಕೈಗಳನ್ನು ಹಿಂದಕ್ಕೆ ಎಳೆದನು, ನನ್ನನ್ನು ನೆಲಕ್ಕೆ ಬೀಳುವಂತೆ ಮಾಡಲು ಪ್ರಯತ್ನಿಸಿ ನನ್ನನ್ನು ಮಳೆಯ ನೀರು ಹರಿಯುತ್ತಿದ್ದ ನೆಲಕ್ಕೆ ಅಪ್ಪಳಿಸಿದ, ನಾನು ಬಿದ್ದ ರಭಸಕ್ಕೆ  ರಸ್ತೆಯ ಕಲ್ಲುಗಳು ನನ್ನ ಭುಜ, ತೋಳ್ ಕೈಗಳಿಗೆ ತಾಗಿತು. ಆತನ ಮುಖವನ್ನು ಸರಿಯಾಗಿ ನೋಡಲು ಪ್ರಯತ್ನಿಸಿದಾಗ ಅವನು ರೇನ್‌ಕೋಟ್‌ ಧರಿಸಿದ್ದನು ಮತ್ತು ಅವನ ಮುಖವನ್ನು ಮುಚ್ಚಿಕೊಂಡಿದ್ದನು, ಅದು ಇನ್ನಷ್ಟು ಭಯಂಕರವಾಗಿ ತೋರುತ್ತಿತ್ತು . ಅವನು ತನ್ನ ಎಲ್ಲಾ ಶಕ್ತಿಯಿಂದ, ಅವನು ನನ್ನ ಕೂದಲನ್ನು ಎಳೆದುಕೊಂಡು ನನ್ನ ಕುರ್ತಾದ ತೋಳನ್ನು ಹರಿದನು. ನನ್ನ ಕೊಡೆ, ಪರ್ಸ್, ಚಪ್ಪಲಿ ಮಳೆಯಲ್ಲಿ ಹರಡಿ  ಚೆಲ್ಲಾಪಿಲ್ಲಿಯಾದವು. 

ನಾನು ಎಂತಹ ಅಪಾಯದಲ್ಲಿ ಸಿಕ್ಕಿಬಿದ್ದಿದ್ದೇನೆಂದರೆ, ನನಗೆ ಆಗಷ್ಟೇ ಕೆಲವು ತಿಂಗಳ  ಹಿಂದೆ ಮೊಣಕಾಲಿನ  ಮೂಳೆಕಟ್ಟು ತಿರುಗಿತ್ತು (ಲಿಗಾಮೆಂಟ್ ಟಿಯರ್) ಇದು ಫಿಸಿಯೋಥೆರಪಿಯಿಂದ ವಾಸಿಯಾಗಿದ್ದ ಕಾರಣ  ಆತನ ಬಲವಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಅಥವಾ ಓಡಲು  ಸಾಧ್ಯವಾಗಲಿಲ್ಲ. 

ನನ್ನ ಶ್ವಾಸಕೋಶದ  ಉಸಿರಿನಿಂದ ಗಂಟಲು ಅರಿಯುವವರೆಗೂ ಸಹಾಯಕ್ಕಾಗಿ ಕಿರುಚುತ್ತಿದ್ದೆ, ಮಳೆಯ ಗುಡುಗು ಮತ್ತು ಮಿಂಚುಗಳಿಗಿಂತ ಜೋರಾಗಿ ಕಿರುಚುತ್ತಿದ್ದೆ.  ಹಾದುಹೋಗುವವರು  ಯಾರಾದರೂ ನನ್ನ ಚೀರಾಟವನ್ನು ಕೇಳಿ ರಕ್ಷಣೆಗೆ ಬರುತ್ತಾರೆ ಎಂದು ಭಾವಿಸಿದೆ. ಆದರೆ ಭಾರೀ ಮಳೆಯಿದ್ದ ಕಾರಣ  ಎಲ್ಲರೂ ಮನೆಯೊಳಗೆ ಇರುವಂತೆ ತೋರುತ್ತಿತ್ತು. ನಾನು ಸಂಪೂರ್ಣವಾಗಿ ಪರಿತ್ಯಕ್ತಳಾಗಿದೆ  ಎಂದು ಭಾವಿಸಿದಾಗ, ಯಾರೋ ತಮ್ಮ ಬಾಲ್ಕನಿಯಿಂದ ನನ್ನನ್ನು ನೋಡಿ ಸಹಾಯಕ್ಕಾಗಿ ಅಕ್ಕಪಕ್ಕ ಮನೆಯ ಕೆಲವು  ಧೈರ್ಯಶಾಲಿಗಳು ಗಂಡಸರು, ನನ್ನ ಸಹಾಯಕ್ಕೆ ಓಡಿ ಬಂದರು, ಆದರೆ ಅಷ್ಟರಲ್ಲಾಗಲೇ ನನ್ನ ಮೇಲೆ ದಾಳಿ ಮಾಡಿದ ವ್ಯಕ್ತಿ ಓಡಿಹೋಗಿದ್ದ. 

ನನಗೆ ಏನಾಯಿತು? ಏನಾಯಿತು  ಎಂದು ಕೇಳುತ್ತಿರಲು,  ಹೇಗೆ ತಾನೇ ಹೇಳಲಿ ಅಂತಹ ಭಯಾನಕ  ಮತ್ತು ಅಸಹ್ಯ ಅನುಭವವನ್ನು?  ಯಾರೋ ದಾರಿಹೋಕರಿಗೆ ವಿವರಿಸಲು  ಹೇಗೆ ಸಾಧ್ಯ? ನನ್ನ ನೋವು ಬಾರದ ಭಾಷೆಯ ನಾನು ಪದಗಳಲ್ಲಿ  ಹೇಗೆ ಅರ್ಥೈಸಲಿ?

ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು, ಹಾಸ್ಟೆಲ್ ವಾರ್ಡನ್ ನನ್ನನ್ನು ದೂಷಿಸಿದರು, ದಾಳಿಕೋರ ನನ್ನ ಚಿನ್ನದ ಸರವನ್ನು ನೋಡಿ ನನ್ನನು  ಹಿಂಬಾಲಿಸಿದ್ದಾನೆ  ಎಂದು ಅಲ್ಲಿರುವವರೊಂದಿಗೆ ಹೇಳಿದಳು. ಅಂತಹ ನೋವುಂಟುಮಾಡುವ ಮಾತುಗಳನ್ನು ಅವಳು ಹೇಗೆ ಹೇಳಬಲ್ಲಳು? 

ನನ್ನಿಂದ ಏನಾದ್ರೂ ಕದಿಯುವ ಉದ್ದೇಶವೇ ಆಗಿದ್ದರೆ ಅಷ್ಟು ಹಾನಿಯಾಗದಂತೆ ನನ್ನ ಪರ್ಸ್ ಅಥವಾ ಚೈನ್ ಅನ್ನು ಆತ ತೆಗೆದುಕೊಂಡು ಹೋಗಬಹುದಿತ್ತು. ಆತ ಕಳ್ಳನಾಗಿದ್ದರೆ ಬಿದ್ದ ನನ್ನ ಪರ್ಸನ್ನು ತೆಗೆದುಕೊಂಡು ಓಡಬಹುದಿತ್ತಲ್ಲವೇ. ನನಗೆ ವಾರ್ಡನ್ ಮಾತಿನಿಂದ  ನನ್ನ ಕಣ್ಣೀರನ್ನು ತಡೆಹಿಡಿಯಲಾಗಲಿಲ್ಲ; ನಾನು ಇನ್ನೂ ಜೋರಾಗಿ ಅಳಲಾರಂಭಿಸಿದೆ. 

ಆ ಕ್ಷಣದಲ್ಲಿ, ಅಲ್ಲಿಯ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ನನ್ನನ್ನು, ನನ್ನ ನೋವನ್ನು  ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿರಲಿಲ್ಲ. ಈ ಹೇಸಿಗೆಯ ಕೃತ್ಯ ಅನುಭವಿಸಿದ ನನಗೆ  ನೋವಿನಿಂದ ಪಾರಾಗಲು ಬೆಂಕಿಗೆ ಜಿಗಿಯಬೇಕು ಎಂಬಂತೆ ಇನ್ನು ಬದುಕುವುದೇ ಬೇಡ ಅನಿಸಿ ಅಳು ತಡೆಯಲಾಗದೆ ಅಳುತ್ತಿದ್ದೆ.

ಹಾಸ್ಟೆಲ್‌ಗೆ ಹಿಂತಿರುಗಿದಾಗ, ಅಲ್ಲಿ ವಾಸಿಸುವ ಎಲ್ಲಾ ಮಹಿಳೆಯಾರು ನನ್ನನ್ನು ದಿಗ್ಭ್ರಮೆಯಿಂದ ನನ್ನನು ನೋಡುತ್ತಿದ್ದಂತೆ, ನನಗೆ ಅದು  ಇನ್ನಷ್ಟು ಮರ್ಯಾದೆ ಹೋದಂತೆ ಅನಿಸತೊಡಗಿತು. 

ನಾನು ನನ್ನ ರೂಮಿಗೆ ಧಾವಿಸಿದೆ. ಯಾವುದೇ ಕಾರಣಕ್ಕೂ ಹೊರಗೆ ಬರಲು ಇಷ್ಟವಿರದೇ ಬಾಗಿಲನ್ನು ಹಾಕಿ,  ಬಿಕ್ಕಿ ಬಿಕ್ಕಿ ಅಳುತ್ತಲೇ ನಾನು ನನ್ನ ಅಮ್ಮನಿಗೆ  ಫೋನ್ ಮಾಡಿದೆ. ನನ್ನ ಮುಖದಲ್ಲಿ ಕಣ್ಣೀರು ಹರಿಯಿತು, ಆದರೆ ಏನಾಯಿತು ಎಂದು ಹೇಳಲು ನನಗೆ ಸರಿಯಾದ ಪದಗಳು ಸಿಗಲಿಲ್ಲ. ನಾನು ಅವಳೊಂದಿಗೆ ನನಗಾದ  ಸಂಕಟದ ಅನುಭವವನ್ನು ತೊದಲುತ್ತಾ ಹಂಚಿಕೊಂಡಾಗ ಆಕೆಯು ಮೆಲುಧ್ವನಿಯಲ್ಲಿ ಅತ್ತಳು. ತಕ್ಷಣವೇ ಪಾಲಕ್ಕಾಡ್ ನಗರದ ಹೊರವಲಯದ ಊರಿನಲ್ಲಿ  ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನನ್ನ ಕಸಿನ್ ಪಿಂಕುವಿಗೆ  ನನ್ನ ತಾಯಿಯಿ ವಿಷಯವನ್ನು ತಿಳಿಸಿ,  ಮತ್ತು ಸಾಧ್ಯವಾದಷ್ಟು ಬೇಗ ನನ್ನನ್ನು ಭೇಟಿ ಮಾಡಲು ಹೋಗಲು ಹೇಳಿದಳು. 

ಸ್ವಲ್ಪ ಸಮಯದ ನಂತರ, ದೂರು ದಾಖಲಿಸುವ ಬಗ್ಗೆ ಹಾಸ್ಟೆಲ್ ವಾರ್ಡನ್‌ನೊಂದಿಗೆ ಮಾತನಾಡಲು ನನಗೆ ಧೈರ್ಯ ಬಂದಿತು. ನಮ್ಮ ಚರ್ಚೆಯ ಸಮಯದಲ್ಲಿ, ಪಕ್ಕದ ಮನೆಯ  ವ್ಯಕ್ತಿಯೊಬ್ಬರು ತಮ್ಮ ಮನೆಯ ಹೊರಗೆ ಸಿಸಿಟಿವಿ ಕ್ಯಾಮೆರಾವನ್ನು ಹೊಂದಿದ್ದು, ರಸ್ತೆಯ ನೋಟವನ್ನು ಸೆರೆಹಿಡಿಯಲಾಗಿದೆ ಎಂದು ನಮಗೆ ತಿಳಿಸಿದರು. ನಾನು ಪೋಲಿಸಿಗೆ ದೂರನ್ನು ಕೊಡುವುದೆಂದು ನಿರ್ಧರಿಸಿದರೆ, ದೃಶ್ಯಾವಳಿಗಳನ್ನು ಪಡೆಯಲು ನನಗೆ ಸಹಾಯ ಮಾಡಲು ಅವರು ಮುಂದಾದರು.

ಅವರ ಈ ಸಹಾಯಕ್ಕೆ  ನಾನು ಆತನಿಗೆ ಧನ್ಯವಾದ ಹೇಳಿದೆ , ಆದರೆ ರಾಕ್ಷಸಿ  ವಾರ್ಡನ್ ಈ ಕಂಪ್ಲೇಂಟ್ ಕೊಡುವುದನ್ನು ವಿರೋಧಿಸಿದರು. ಅವಳು ಹಾಸ್ಟೆಲ್‌ನ ಖ್ಯಾತಿಯ ಬಗ್ಗೆ ಚಿಂತಿತಳಾಗಿದ್ದಳು ಮತ್ತು ಯಾವುದೇ ಕ್ರಮ ತೆಗೆದುಕೊಳ್ಳದಂತೆ ನನ್ನನ್ನು ಸುಮ್ಮನಿರಲು ಹೇಳಿದಳು. 

ಅದೇ ದಿನ ಸಂಜೆ, ನನ್ನ ಸ್ನೇಹಿತೆ  ತಾಜು ಹಾಸ್ಟೆಲ್‌ನಲ್ಲಿರುವ ಇತರರಿಂದ ನನಗೆ ಏನಾಯಿತು ಎನ್ನುವುದನ್ನು ತಿಳಿದು ಕೊಂಡಳು. ರೂಮಿಗೆ ಬಂದ  ಅವಳು,  ನನ್ನನ್ನು  ಏನೂ ಕೇಳಲಿಲ್ಲ. ಎರಡು ನಿಮಿಷಗಳ ನಂತರ ತಾಜುಗೆ ನಮ್ಮ ರೂಮಿನ  ಬಳಿ ಡಿಸಿ ಕಚೇರಿಯಲ್ಲಿ ಕೆಲಸ ಮಾಡುವ  ಒಬ್ಬ ಮಹಿಳೆಯ ನೆನಪಾಯಿತು. ತಾಜು ಅವರನ್ನು ಸಂಪರ್ಕಿಸಿ ಘಟನೆಯನ್ನು ಮಲೆಯಾಳಂ ನಲ್ಲಿ ವಿವರಿಸಿದಳು. 

ಡಿಸಿ ಕಚೇರಿಯಿಂದ ಬಂದ ಮಹಿಳೆ ಎಲ್ಲಾ ಮಾಹಿತಿ ಕಲೆಹಾಕಿ ಹಾಸ್ಟೆಲ್‌ಗೆ ಬಂದಿದ್ದರು. ಬರುವಾಗಲೇ ಅವರು  ಮಲಯಾಳಂನಲ್ಲಿ ದೂರು ಸಿದ್ಧಪಡಿಸಿ ಬಂದಿದ್ದರಿಂದ ನನಗೆ ಓದಿ ತಿಳಿಸಿದಳು . ನನಗೆ ಕೆಲವು ಭಾಗಗಳು ಅರ್ಥವಾಗದ ಕಾರಣ, ಅವಳು ನನಗೆ ಇಂಗ್ಲಿಷ್‌ಗೆ ಅನುವಾದಿಸಿ ಹೇಳಿದರು ನಾನು ಒಪ್ಪಿಕೊಂಡೆ. “ನನ್ನ ಮುಖ ಅಥವಾ ಚಿತ್ರ ಯಾವುದೇ ಬಯಲಾಗದಂತೆ, ಇಂತಹ ಪರಿಸ್ಥಿತಿ ಬೇರೆ ಹೆಣ್ಣಿಗೆ ಆಗಬಾರದು ಎಂದು ದಿನಕ್ಕೆ ಐದು ಬಾರಿ ಪೋಲೀಸರ ಪಿಂಕ್ ಸ್ಕ್ವಾಡ್ ವಾಹನ ಪಟ್ರೋಲ್ಲಿಂಗ್ ಬರಲು ಮನವಿ ಮಾಡುವುದಾಗಿ ಹೇಳಿದರು”.  

ವಾರ್ಡನ್  ತಾನು ಸಹಿ ಹಾಕುವುದಿಲ್ಲವೆಂದು ಹೇಳಿದಳು.  ಡಿಸಿ ಕಚೇರಿಯ ಮಹಿಳೆ ದೂರಿಗೆ ಸಹಿ ಹಾಕುವಂತೆ ಒತ್ತಾಯಿಸಿದರು, ಸಹಿ ಹಾಕದಿದ್ದಲ್ಲಿ ಹಾಸ್ಟೆಲ್ ಆಡಳಿತ ಮಂಡಳಿಯ ಕೈವಾಡ ಇರಬಹುದೇನೋ ಎಂದು ವರದಿ ಮಾಡುವುದಾಗಿ ಬೆದರಿಕೆ ಹಾಕಿದರು. ಕೊನೆಗೆ ನಾನು ಮತ್ತು ವಾರ್ಡನ್ ಇಬ್ಬರೂ ದೂರಿಗೆ ಸಹಿ ಹಾಕಿದೆವು.

ಮರುದಿನ,  ಪಿಂಕು ನನ್ನ ಪಾಲಕ್ಕಾಡ್‌ಗೆ ಬಂದಳು , ಆದರೆ ನಗರದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಪರಿಸ್ಥಿತಿ ಇನ್ನಷ್ಟು ಭಯಾನಕವಾಯಿತು. ನೀವು 2018 ರ ಕೇರಳ ಪ್ರವಾಹದ ಬಗ್ಗೆ ಯೋಚಿಸುತ್ತಿದ್ದರೆ…  ಹೌದು,  ಅದೇ ಪ್ರವಾಹದಲ್ಲಿ ನಾವು  ತೀವ್ರವಾಗಿ ಸಿಲುಕ್ಕಿದ್ದೇವು. ಬುಕಿಂಗ್ ಮಾಡಿದ ಟೀಕೆಟ್ ಪ್ರಕಾರ  ಪಿಂಕು ಮತ್ತು ನಾನು ಮಂಗಳೂರಿಗೆ ರೈಲು ಹತ್ತಲು ಪ್ರಯತ್ನಿಸಿದೆವು, ಆದರೆ ನೀರಿನ ಮಟ್ಟವು ಹೆಚ್ಚಾಗಿದ್ದು, ಹಳಿಗಳು ಜಲಾವೃತವಾಗಿದ್ದು, ನಮ್ಮ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಮಂಗಳೂರು ಕಡೆಗೆ ಮುಂದಿನ ನಿಲ್ದಾಣವಾದ ಶೋರ್ನೂರು ಜಂಕ್ಷನ್‌ನಲ್ಲಿ  ಎಂಬಲ್ಲಿ ನಾವು ಉಳಿಯಬೇಕಾಗಿತ್ತು. 

ಆ ರಾತ್ರಿ, ನಾವು ರೈಲ್ವೇ ಪ್ಲಾಟ್‌ಫಾರ್ಮ್‌ನ ಬದಿಗಳಲ್ಲಿ ಇದ್ದೆವು ಸುತ್ತಲೂ  ಮಳೆಯಿಂದ ಸುತ್ತುವರೆದಿದ್ದ ಊರು ರೈಲ್ವೆ ಸ್ಟೇಷನ್ ಬಿಟ್ಟರೆ ಬೇರೆಲ್ಲಿಯೂ ಹೋಗಲು ಸಾಧ್ಯವಾಗಲಿಲ್ಲ. ಭಾರೀ ಮಳೆ ಮತ್ತು ಪ್ರವಾಹದ ಕಾರಣ, ನಾವು ಆಶ್ರಯ ಪಡೆಯಬಹುದಾದ ಏಕೈಕ ಸ್ಥಳವೆಂದರೆ ರೈಲ್ವೆ ನಿಲ್ದಾಣ ಮಾತ್ರವಾಗಿತ್ತು. ನಮ್ಮ ಬಳಿಯಿದ್ದ ಎರಡು ಸಣ್ಣ ಹೊದಿಕೆಗಳನ್ನು ಹೊದ್ದಿಕೊಂಡೆವು.  ಮತ್ತು ನಮ್ಮ ಕಿಟ್ ಬ್ಯಾಗ್‌ಗಳನ್ನು ತಲೆ ದಿಂಬುಗಳಾಗಿ ಬಳಸಿದೆವು. 

 ಅಂದು ರೈಲ್ವೆ ನಿಲ್ದಾಣವು 6000 ಕ್ಕೂ ಹೆಚ್ಚು ಜನರಿಂದ ಕಿಕ್ಕಿರಿದು ತುಂಬಿತ್ತು. ಆದ್ದರಿಂದ, ಪಿಂಕು ಮತ್ತು ನಾನು ಪ್ಲಾಟ್‌ಫಾರ್ಮ್‌ನಲ್ಲಿ ಮಲಗಲು ನಿರ್ಧರಿಸಿದೆವು. ರಾತ್ರಿಯಾಗುತ್ತಿದ್ದಂತೆ, ನಾಯಿಗಳು ಸಹ ನಮ್ಮ ಹೊದಿಕೆಯ ಬೆಚ್ಚನೆಗೆ ನಮ್ಮ ಪಾದಗಳ ಬಳಿ ಮಲಗಿದವು. 

ಸಹಾಯಕ್ಕಾಗಿ ಯಾರನ್ನೂ ಸಂಪರ್ಕಿಸಲು ಯಾವುದೇ ಸೆಲ್ಯುಲಾರ್ ನೆಟ್‌ವರ್ಕ್ ಇಲ್ಲದೆ, ಪ್ರವಾಹ ಮತ್ತು ಭಾರೀ ಮಳೆಯ ಮೂಲಕ ನ್ಯಾವಿಗೇಟ್ ಮಾಡಲು, ಮನೆಯವರಿಗೆ ವಿಷಯ ತಿಳಿಸಲು, ಹೊಟ್ಟೆಗೆ ಊಟವಿಲ್ಲದೆ, ಎರಡು ದಿನ ಹರಸಾಹಾಸಪಟ್ಟ ನಂತರ ಕೊನೆಗೆ ಮಂಗಳೂರಿಗೆ ಬಂದೆವು. 

ಅಮ್ಮ ನನ್ನನು ಆಲಂಗಿಸಿ ಯೋಗ ಕ್ಷೇಮ ವಿಚಾರಿಸಿ, ಮುತ್ತಿಟ್ಟಳು. 

ಸ್ವಲ್ಪ ಸಮಯದ ನಂತರ, ಶಾಲೆಯ ಆಡಳಿತ ಮಂಡಳಿಯಿಂದ ನನಗೆ ಫೋನ್ ಬಂದಿತು, ನಾನು ಪಾಲಕ್ಕಾಡ್‌ಗೆ ಕೆಲಸಕ್ಕೆ ಮರಳುವುದು ಅವರಿಗೆ ಇಷ್ಟವಿಲ್ಲ ಎಂದು ತಿಳಿಸಿದರು. ಬದಲಾಗಿ, ಅವರು ನನಗೆ ತಿರುವನಂತಪುರದ ಬೇರೆ ಶಾಲೆಯಲ್ಲಿ ಸ್ಥಾನವನ್ನು ನೀಡಿದರು. 

ಪಾಲಕ್ಕಾಡ್ ನನ್ನ ನೆಚ್ಚಿನ  ಸ್ಥಳವಾಗಿತ್ತು, ಆದರೆ ತಿರುವನಂತಪುರದಲ್ಲಿ ಕೆಲಸ ಮಾಡಲು ನಾನು ಮಾನಸಿಕವಾಗಿ ಸಿದ್ಧಳಾ ಗಿರಲಿಲ್ಲ. ಅದೇನೇ ಇದ್ದರೂ, ನಾನು ಅಲ್ಲಿ ಶಾಲೆಗೆ ಸೇರಿಕೊಂಡೆ, ಆದರೆ ಆಘಾತಕಾರಿ ನನ್ನ  ಅನುಭವದ ನನ್ನ ಭಯವು ನನ್ನನ್ನು ಕಾಡಿದಂತಿತ್ತು. 

ಈ ಭಾವನಾತ್ಮಕ ಹೊರೆಯನ್ನು ನಿಭಾಯಿಸಲು ನನಗೆ ಸಾಧ್ಯವಾಗಲಿಲ್ಲ. ಹೀಗಾಗಿ, ನಾನು ರಾಜೀನಾಮೆ ನೀಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡೆ ಮತ್ತು ಮಂಗಳೂರಿಗೆ ಮರಳಿದೆ, ಅಲ್ಲಿ ನಾನು ನನ್ನ ಕುಟುಂಬದೊಂದಿಗೆ ಎರಡು ತಿಂಗಳ ಕಾಲ ಗುಣಮಟ್ಟದ ಸಮಯವನ್ನು ಕಳೆದೆ. ಈ ಸಮಯದಲ್ಲಿ, ನಾನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಲವಾಗಿರಲು ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡಿದೆ.   ಮತ್ತೆ ನಾನು ಹೊಸ ಉದ್ಯೋಗಾವಕಾಶಗಳಿಗಾಗಿ ಹುಡುಕಲು ಪ್ರಾರಂಭಿಸಿದೆ ಮತ್ತು ಆಗ ನಾನು ಕ್ರಿಸ್ಟಿನಾ ಎಂಬ ಹುಡುಗಿಯ ಸಂಪರ್ಕ ಸಿಕ್ಕಿತ್ತು.  ಅವಳು ತನ್ನ ಸಹಾಯ ಮತ್ತು ತನಗೆ ಗೊತ್ತಿದ್ದ ಇತರರನ್ನು ಪರಿಚಯಿಸಿ ಅವರ ಕಾಂಟಾಕ್ಟ್ ನಂಬರ್  ನೀಡಿದಳು, ಇದು ನಾನು ಝೋಹೋದಲ್ಲಿ (zoho) ಇಂಟರ್ವ್ಯೂ ನೀಡಲು ಸಹಾಯವಾಯಿತು. 

ನಾನು ಕೆಲಸಕ್ಕಾಗಿ ಜೊಹೊಗೆ ಹೋದಮೇಲೆ  ನನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭವಾಯಿತು. ಇದು ಊಹಿಸಿದಷ್ಟು ಸುಲಭವಲ್ಲ, ಆದರೆ ಯಾವುದೇ ಪರಿಸ್ಥಿತಿಯಲ್ಲಿಯು  ನಾನು ಧೈರ್ಯಶಾಲಿಯಾಗಿ ಇರಬೇಕು ಎಂದು ನನ್ನನ್ನೇ ನಾನು ಬಲಪಡಿಸಿಕೊಳ್ಳುತಿದ್ದೆ. 

ಆದರೆ ನಾನು ನಿಮಗೆ ಒಂದು ಆಳವಾದ ವಿಷಯವನ್ನು ಹೇಳಲೇಬೇಕು. ನನ್ನ ಜೀವನದಲ್ಲಿ ನನ್ನ  ಅಜ್ಜ- ಅಜ್ಜಿಯರ ಪ್ರಾರ್ಥನೆ, ನನ್ನ ಕುಟುಂಬದವರ ಮತ್ತು ಗುರು ಹಿರಿಯರ ಆಶೀರ್ವಾದವೇ ನನ್ನನ್ನು ಆ ಅಪಾಯದಿಂದ ಪಾರು ಮಾಡಿತು. ಆ ವ್ಯಕ್ತಿಗಳು ಕೇವಲ ಐದು ನಿಮಿಷ ತಡವಾಗಿ ಬಂದಿದ್ದರೆ, ಈ ಘೋರ ಅನುಭವವನ್ನು ಹಂಚಿಕೊಳ್ಳಲು ನಾನು ಇಂದು ಇಲ್ಲದೇ ಇರುತ್ತಿದ್ದೆ.

ನಾನು ಈಗ ದೈಹಿಕವಾಗಿ ಸುರಕ್ಷಿತವಾಗಿದ್ದರೂ ಸಹ, ಆ ದಿನವು ನನ್ನ ಮೇಲೆ ಪರಿಣಾಮ ಬೀರುವ ಭಾವನಾತ್ಮಕ ಗಾಯಗಳನ್ನು ಬಿಟ್ಟಿತು. ದೈಹಿಕ ಗಾಯಗಳಿಂದ ಗುಣವಾಗಲು ಸಮಯ ತೆಗೆದುಕೊಂಡಿತು, ಆದರೆ ಭಾವನಾತ್ಮಕ ಆಘಾತವನ್ನು ನಿಭಾಯಿಸುವುದು ಇನ್ನೂ ಕಷ್ಟಕರವಾಗಿತ್ತು. ನನ್ನ ಭಾವನೆಗಳನ್ನು ವಿವರಿಸಲು ಸರಿಯಾದ ಪದಗಳನ್ನು ಹುಡುಕುವುದು ಕಷ್ಟವಾಗಿತ್ತು.

ಆ ಘಟನೆ ನನ್ನ ಜೀವನದ ಅತ್ಯಂತ ಭಯಾನಕ ಕ್ಷಣಗಳಲ್ಲಿ ಒಂದಾಗಿದೆ.

ದಿನವೂ ಇಂತಹ ಭಯಾನಕ ಘಟನೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುತ್ತಲೇ ಇದೆ. ಅಮಾನವೀಯ ಕೃತ್ಯಗಳು ಒಂದು ಬೀದಿಯಿಂದ ಬೀದಿಗೆ, ಬಾಗಿಲಿನಿಂದ ಬಾಗಿಲಿಗೆ ವಿವಿಧ ರೂಪಗಳಲ್ಲಿ ನಡೆಯುತ್ತಿವೆ. ಮುಗ್ಧ ನವಜಾತ ಶಿಶುಗಳಿಂದ ಹಿಡಿದು ವಯಸ್ಸಾದ ಅಜ್ಜಿಯವರೆಗೂ ಯಾರೂ ಉಳಿದಂತೆ ಕಾಣುತ್ತಿಲ್ಲ.

ನಿಂದನೆ, ಮೋಹ, ಕಿರುಕುಳ, ಮತ್ತು ಕೆಲವು ಸಂದರ್ಭಗಳಲ್ಲಿ, ಅತ್ಯಾಚಾರ ಮತ್ತು ಕೊಲೆಯ ಪ್ರಯತ್ನಗಳು ಆತಂಕಕಾರಿಯಾಗಿ ಸಾಮಾನ್ಯವಾಗಿದೆ.

ನಿಮ್ಮ ಸುತ್ತಮುತ್ತಲಿನ ಜನರು, ನಿಮ್ಮ ಅಕ್ಕ -ತಂಗಿಯರು, ಮಕ್ಕಳು, ಹೆಂಡತಿ ಅಥವಾ ಮಾತೃತ್ವದ ರೂಪದ ವ್ಯಕ್ತಿಗಳು ನಿಮ್ಮೊಂದಿಗೆ ಈ ಕೃತ್ಯಗಳನ್ನು ಮುಕ್ತವಾಗಿ ಚರ್ಚಿಸಿದ್ದಾರೆಯೇ?

ನೀವು ಒಬ್ಬ  ತಂದೆಯಾಗಿ, ಸಹೋದರನಾಗಿ, ಅಥವಾ ಮಧ್ಯವಯಸ್ಕ ಅಥವಾ ವಯಸ್ಸಾದ ಮಹಿಳೆಯರಿಗೆ,ಮಗನ ಪಾತ್ರದಲ್ಲಿದ್ದರೆ,. ಅವರು ಯಾವುದೇ ಕಷ್ಟಕರ ಸಂದರ್ಭಗಳನ್ನು ಎದುರಿಸುತ್ತಿದ್ದರೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಬಯಸಿದರೆ ಕೇಳುವವರಾಗಿರಿ. ನೀವು ಅವರೊಂದಿಗೆ ಇದ್ದೀರಿ ಎಂಬ ಧೈರ್ಯವನ್ನು ಕೊಡಿ. 

ನೀವು ಒಬ್ಬ ಹುಡುಗ ಅಥವಾ ಪುರುಷನಾಗಿ, ನೀವು ನಿಮ್ಮ ಸ್ವಂತ ಕುಟುಂಬವನ್ನು ಹೇಗೆ ಗೌರವಿಸಿ  ರಕ್ಷಿಸುತ್ತೀರೋ, ಅದೇ ರೀತಿಯ ಸೌಜನ್ಯವನ್ನು ಈ ಜಗತ್ತಿನಲ್ಲಿರುವ  ಇತರ ಹುಡುಗಿಯರು ಮತ್ತು ಮಹಿಳೆಯರಿಗೆ ನೀಡಿ.

ಯಾವುದೇ ಹುಡುಗಿ ಅಥವಾ ಮಹಿಳೆ ಏಕಾಂಗಿಯಾಗಿರುವ ಕಾರಣದಿಂದ ಅವಳ ನೋಟ ಅಥವಾ ಉಡುಗೆ, ನಿಮ್ಮನ್ನು ಪ್ರಚೋದಿಸುವಂತಿದ್ದರು  ಲಂಪಟತನಕ್ಕೆ ಈಡೆಮಾಡಿ ಅನುಚಿತವಾದ ಕಾಮೆಂಟ್‌ಗಳನ್ನು ಮಾಡಲು, ಕಿರುಕುಳವನ್ನು ನೀಡಲು ಅಥವಾ ಅವಳ ದುರ್ಬಲತೆಯನ್ನು ಬಳಸಿಕೊಳ್ಳದಿರಿ. ಬದಲಾಗಿ, ಅವರ ಬಗ್ಗೆ ನೀವು ಕಾಳಜಿ ವಹಿಸಬೇಕು ಎಂಬುವುದು ಅನಿವಾರ್ಯವಲ್ಲ, ಆದರೆ ಕನಿಷ್ಠ ಪಕ್ಷ ಗೌರವ ನೀಡಿ. 

ನನ್ನ ಕಥೆಯನ್ನು ಹಂಚಿಕೊಳ್ಳುವ ಮೂಲಕ, ಇತರರು ತಮ್ಮ ಅನುಭವಗಳನ್ನ ಅವರ ಸುತ್ತಮುತ್ತಲಿನವರೊಂದಿಗೆ  ಹಂಚಿಕೊಂಡು ಸಾಂತ್ವನವನ್ನು ಕಂಡುಕೊಳ್ಳಲು ಪ್ರೇರೇಪಿಸಲು ನಾನು ಬಯಸುತ್ತೇನೆ. 

ಪ್ರತ್ಯೇಕವಾಗಿ ಈ ರೀತಿಯ ದೌರ್ಜನ್ಯಕ್ಕೆ ಒಳಪಟ್ಟಿರುವ ಮಹಿಳೆಯರು, ಮಕ್ಕಳು ಅಥವಾ ಯುವತಿಯರೊಂದಿಗೆ ಮುಕ್ತವಾಗಿ ಮಾತನಾಡಿಸಿ, ಅವರಲ್ಲಿರುವ ಆ ಭಯವನ್ನು ಕಿತ್ತುಹಾಕಿ ಅವರ ಆಸೆಗಳನ್ನಾವುದನ್ನು ಪಕ್ಕಕ್ಕಿಡದೆ ಉತ್ತಮವಾದ  ಸಾಂತ್ವನ, ಯಶಸ್ಸಿನ ದಾರಿಗೆ ಅವರನ್ನು ಸಿದ್ದಪಡಿಸಲು  ಪ್ರಯತ್ನಿಸೋಣ.

ನನ್ನ ಕಥೆಯನ್ನು ಓದಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಧನ್ಯವಾದಗಳು. 

Leave feedback about this

  • Quality
  • Price
  • Service
Choose Image