Paramayya's Paddi - roshdsilva.com
ಗದ್ಯಂ ಹೃದ್ಯಂ

ಪರಮ್ಮಯ್ಯನ ಪದ್ದಿ

“ಅಪ್ಪ ಹೇಗಿದ್ದರೂ ನಾವು ಇಲ್ಲಿ ಫ್ಯಾಕ್ಟರಿ ಕಟ್ಟಿಸುತ್ತಿದ್ದೇವೆಲ್ಲಾ, ಅಮೆರಿಕಾಗೆ ಮತ್ತೆ ಹೋಗಿ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಅಲ್ಲಿಗೆ ಯಾಕೆ ಹೋಗಬೇಕು ಅಲ್ವಾ? ಅದಕ್ಕೆ ನಾವು ಇಲ್ಲೇ ಇದ್ದು ಬಿಡೋಣ ಅಂತ ಅಂದುಕೊಂಡಿದ್ದೇವೆ.  ಆದರೆ, ಅಷ್ಟು ಸುಲಭವಾಗಿ ಅಮೇರಿಕ ಬಿಟ್ಟುಬರೋದಕ್ಕೆ ಆಗೋದಿಲ್ಲ ನಿಮಗೂ ಗೊತ್ತಲ್ವಾ  ಹಾಗಾಗಿ ನಾವು ಎರಡು ತಿಂಗಳ ಮಟ್ಟಿಗೆ ಅಲ್ಲಿಗೆ ಹೋಗಿ ನಮ್ಮ ಬಟ್ಟೆ,  ವಸ್ತು ಸಾಮಗ್ರಿಗಳನ್ನು, ಮತ್ತು ಮಕ್ಕಳ ಶಾಲೆಯ ವರ್ಗಾವಣೆ ಪತ್ರವೆಲ್ಲ ತರಬೇಕು. ಹಾಗಾಗಿ ನೀವು ಒಂದೆರಡು ತಿಂಗಳ ಮಟ್ಟಿಗೆ ವಾಯೋಧಾಮದಲ್ಲಿ ಉಳಿದುಕೊಳ್ಳಿ. ನಾವು ಅಮೆರಿಕಾದಿಂದ ಬಂದ  ತಕ್ಷಣ ನಿಮ್ಮನ್ನು ಮತ್ತೆ ಮನೆಗೆ ಕರೆದುಕೊಂಡು ಬರುತ್ತೇವೆ” ಎಂದು ಭರವಸೆಯ ಮಾತುಗಳನ್ನು ಹೇಳಿದರು.

ಅಂದು ಸ್ವಾತಂತ್ರ್ಯ ದಿನಾಚರಣೆಯ ದಿನ  ಧ್ವಜಾರೋಹಣದ ನಂತರ  “ವಯೋಧಾಮ”ದ  ಅಂಗಳದ ಮುಂದೆ ಅಚ್ಚುಕಟ್ಟಾಗಿ ಹಾಕಿದ್ದ ಶಾಮಿಯಾದ ಅಡಿಯಲ್ಲಿ ಸಾಲಾಗಿ ಖುರ್ಚಿಗಳನ್ನು ಇರಿಸಿದ್ದರು. 

ಅದರ ಮುಂದೆಯೇ ಒಂದು ಸಣ್ಣ ವೇದಿಕೆ. ವಾರ್ಡನ್ ಊರ್ಮಿಳಾ ಎಲ್ಲ ಹಿರಿಯರನ್ನು ಸಾಲಾಗಿ ಕುಳಿತು ಕೊಳ್ಳಲು ಮೈಕ್ನಲ್ಲಿ ಹೇಳಿ, ಈಗ ತಮ್ಮ ಸಹ ಮಿತ್ರರು “ವಂದೇ ಮಾತರಂ” ಹಾಡನ್ನು ಹಾಡಲು ವೇದಿಕೆ ಮೇಲೆ ಸ್ವಾಗತಿಸಿದರು. 

ಶ್ರೀಲಲಿತಾ, ಸುಶೀಲಮ್ಮ, ವಸುಂದರಾ, ಶೇಷಮ್ಮ, ಮತ್ತು ಪದ್ಮಿನಿಯಮ್ಮ ಇವರೆಲ್ಲರೂ ವೇದಿಕೆ ಮೇಲೆ ಬಂದು  ಹಾಡನ್ನು ಹಾಡಿ ಕಾರ್ಯಕ್ರಮವನ್ನು ಆರಂಭಿಸಿ ನಂತರ ಕೆಲವರು ದೇಶಪ್ರೇಮದ ಭಕ್ತಿಗೀತೆಗಳನ್ನು, ಭಾಷಣಗಳನ್ನು ಮಾಡಿದರು ನಂತರ  ಉಪಹಾರಕ್ಕೆ ಉಪ್ಪಿಟು, ಕೇಸರಿಬಾತು, ನಂತರ ಫಿಲ್ಟರ್ ಕಾಫಿ, ಸ್ವಾತಂತ್ರ್ಯ ದಿನಾಚರಣೆಯಾದುದರಿಂದ, ಕೆಲವು ದಾನಿಗಳು ಸಿಹಿ ತಿಂಡಿಯನ್ನು ಕೊಟ್ಟು ಹೋಗಿದ್ದರು. 

ವಯೋಧಾಮದಲ್ಲಿರುವ ವೃಧ್ಧರ ಪ್ರತಿಯೊಂದು ಕಾಯಿಲೆ, ಕಸಾಲೆಯ ಪಟ್ಟಿ, ಅದಕ್ಕೆ ಬೇಕಾಗಿರುವ ಔಷಧಿಗಳು, ಆಹಾರಕ್ರಮ ಎಲ್ಲವು ಅಲ್ಲಿರುವ ವ್ಯವಸ್ತಾಪಕರಿಗೆ ಮತ್ತು ದಾದಿಯರಿಗೆ ತಿಳಿದಿದ್ದರಿಂದ ಎಲ್ಲರಿಗೂ ಉಪ್ಪಿಟು ಕೇಸರಿಬಾತ್ ಜೊತೆಯಲ್ಲಿ ಕೇವಲ ಒಂದೊಂದೇ ಮೈಸೂರ್ ಪಾಕ್ ಮತ್ತು ಲಡ್ಡುವನ್ನು ಅವರ ತಟ್ಟೆಗೆ ಹಾಕಿ ಕೊಟ್ಟರು. 

ಸ್ವಲ್ಪ ಡೈಯಾಬಿಟೀಸ್ ಜಾಸ್ತಿ ಇರುವವರಿಗೆ ಅರ್ಧ ಮೈಸೂರು ಪಾಕು, ಅರ್ಧ ಲಡ್ಡುನ್ನು ತಟ್ಟೆಗೆ ಇಡುತ್ತಾ “ಸ್ವಲ್ಪ ಶುಗರ್ ಕಂಟ್ರೋಲ್ ಮಾಡ್ಕೊಳಿ, ಆಮೇಲೆ ಎಷ್ಟು ಬೇಕಾದ್ರೂ ತಿನ್ನೋದಿಕ್ಕೆ ನಾನೇ ತಂದು ಕೊಡುತ್ತೇನೆ” ಎಂದು ಸಮಾಧಾನಕರ ಮಾತನ್ನು ಹೇಳುತ್ತಾ ಉಪಹಾರವನ್ನು ಬಡಿಸುತ್ತಿದ್ದರು. 

ಪರಮ್ಮಯ್ಯರಿಗೂ ಈ ನಡುವೆ ಶುಗರ್ ಸ್ವಲ್ಪ ಜಾಸ್ತಿಯೇ ಇತ್ತು. ಒಂದು ತಿಂಗಳಿಂದ ಪಥ್ಯದ ಅಡುಗೆಯನ್ನು ಊಟ ಮಾಡಿ ಅವರ ನಾಲಿಗೆಯ ರುಚಿ ಸತ್ತು ಹೋಗಿತ್ತು. 

ತಟ್ಟೆಗೆ ಸಿಹಿತಿಂಡಿ ಬೀಳುತ್ತಲೇ ಸಂತೋಷದಿಂದ ಮೇಜಿನ ಬಳಿ ಹೋಗಿ ತಿನ್ನಲು  ಕುಳಿತುಕೊಳ್ಳುತ್ತಿದ್ದಾಗ , ಪಕ್ಕದಲ್ಲಿ ಕುಳಿತ್ತಿದ್ದ ಹೆಂಗಸನ್ನು ನೋಡಿ, “ಅರರೆ.. ನೀವು.. ನೀವು ಪದ್ಮಾ ಅಲ್ವೇ?” ಎನ್ನಲು 

“ಇಲ್ಲ ನಾನು ಪದ್ಮಿನಿ”. 
“ಹಾಂ ಪದ್ಮಿನಿ. ವಯಸ್ಸಾಯಿತಲ್ವೇ ಹೆಸರು ಬೇಗ ನೆನಪಿಗೆ ಬರಲಿಲ್ಲ” 

ಇಲ್ಲಿಗೆ ಹೊಸದಾಗಿ ಬಂದಿದ್ದೀರೇನು? ಹೌದು! ಎಂದು ಪದ್ಮಿನಿಯವರು ಉತ್ತರಿಸಿದರು. 

“ನೀವು  ವಂದೇ ಮಾತರಂ ಹಾಡು ಹಾಡುತ್ತ ಇರುವಾಗ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂದು ಬಿಟ್ಟವು”. ಎಂದು ಹೇಳುತ್ತಿರುವಾಗಲೇ 

“ಓಹ್ ಥಾಂಕ್ಯೂ!” ಎಂದು ಹೇಳಿ ಮೇಜಿನಿಂದ ತಮ್ಮ ತಟ್ಟೆ, ಲೋಟವನ್ನು ತೆಗೆದುಕೊಂಡು ಪದ್ಮಿನಿಯಮ್ಮ ಹೋದರು. 

ಪರಮಯ್ಯನವರು “ನಾನು ಹೇಳಿದ್ದು ಏನಾದರೂ ತಪ್ಪು ಇತ್ತೇ? ಎಂದು ಮನಸ್ಸಿನಲ್ಲಿ ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ತಿಂಡಿಯನ್ನು ತಿನ್ನಲು ಮುಂದಾದರು.

ಪರಮ್ಮಯ್ಯನವರಿಗೆ ನೂರು ಎಕರೆ ತೆಂಗಿನ ತೋಟ, ಹೊಲ, ಗದ್ದೆ ಎಲ್ಲ ಸೌಕರ್ಯವಿದ್ದ ಕುಟುಂಬದಲ್ಲಿ ಹುಟ್ಟಿ ಬೆಳೆದವರಾದರು ಬಾಲ್ಯದಲ್ಲೇ ಅವರು ತಮ್ಮ ತಂದೆಯನ್ನು ಕಳೆದುಕೊಂಡ ಕಾರಣದಿಂದಾಗಿ ತಮ್ಮ ಶಿಕ್ಷಣವನ್ನು ನಿಲ್ಲಿಸಬೇಕಾಯಿತು. 
ಮನೆಯ ಎಲ್ಲ ಜವಾಬ್ದಾರಿ ಅವರ ಮೇಲಿದ್ದ ಕಾರಣ ತಮ್ಮ ಮೂರೂ ತಂಗಿಯರಿಗೂ ಒಳ್ಳೆಯ ಮನೆತನಕ್ಕೆ ಕೊಟ್ಟು ಮದುವೆ ಮಾಡಿಸಿದರು.  ನಂತರ  ಅವರು ತಮ್ಮ ದೂರದ ಸಂಬಂಧಿಕರ ಹೆಣ್ಣು ಮಗಳೊಬ್ಬಳನ್ನು ಮದುವೆಯಾದರು. 
ಪರಮ್ಮಯ್ಯನಿಗೆ ಇಬ್ಬರು ಗಂಡು ಮಕ್ಕಳು. ಪ್ರಾಥಮಿಕ ಶಿಕ್ಷಣದ ವರೆಗೂ ಊರಿನಲ್ಲಿ ಓದಿಸಿದ ನಂತರ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಎಂದು ಪಟ್ಟಣದ ಶಾಲೆಗೆ ಹಾಕಿದ್ದರು. ನಂತರ ಕಾಲೇಜು ವ್ಯಾಸಂಗಕ್ಕೆ ಬೆಂಗಳೂರಿಗೆ ಸೇರಿಸಿದರು. 

ಬಾಲ್ಯದಿಂದಲೇ ತಂದೆ ತಾಯಿಯಿಂದ ದೂರ ಉಳಿದಿದ್ದ ಮಕ್ಕಳಿಗೆ, ತಂದೆ-ತಾಯಿಯ ಪ್ರೀತಿ ವಾತ್ಸಲ್ಯವೆಲ್ಲವು ಅಷ್ಟಕ್ಕಷ್ಟೇ ಇತ್ತು. 

ಅಮ್ಮೋವ್ರು ಪರಮಯ್ಯನಿಗೆ , “ರೀ ಮನೆ ಮಕ್ಕಳು ಮನೆಯಲ್ಲಿ ಬೆಳೆಯಲಿ, ನಾವು ಅವರಿಷ್ಟದ ಪ್ರಕಾರ ಅವರನ್ನು ಬದುಕಲು ಬಿಟ್ಟರೆ ಮುಂದೆ ನಮ್ಮ ಕೊನೆಗಾಲಕ್ಕೆ ಬಂದು ನೋಡಿಕೊಳ್ಳುವವರಾರು ಎಂದು” ಅನೇಕ ಬಾರಿ ಹೇಳುತ್ತಿದ್ದರು. 

“ನಮ್ಮ ಮಕ್ಕಳಿಗೆ ನಮ್ಮ ಮೇಲೆ ಪ್ರೀತಿ ಎಲ್ಲಿ ಹೋದ್ರು ಇರುತ್ತೆ ಕಣೇ. ನೀನು ತಲೆಕೆಡಿಸಿಕೊಳ್ಳಬೇಡ ಎಂದು ಹೇಳಿ ಸಮಾಧಾನಿಸುತ್ತಿದ್ದರು. 
 
ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮದುವೆ ವಿಷಯ ಪ್ರಸ್ತಾಪಿಸುವಾಗ ದೊಡ್ಡವನು ಬೆಂಗಳೂರಿನಲ್ಲಿಯೇ ಒಂದು ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಅವಳೊಂದಿಗೆ ಮದುವೆ ಮಾಡಿಸುವಂತೆ ಕೇಳಿಕೊಂಡ. ಹಾಗೆಯೇ ಕಿರಿಯವನು ಗುಜರಾತಿನ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಆತನು ಅವಳನ್ನೇ ಮದುವೆಯಾಗುವುದಾಗಿ ಹಠ ಮಾಡಿದ. ಬೇರೇನೂ ಉಪಾಯವಿಲ್ಲದೆ  ಪರಮ್ಮಯ್ಯ ಮಕ್ಕಳ ಇಷ್ಟದ ಪ್ರಕಾರ ಮದುವೆ  ಮಾಡಿಸಿದರು. 
ಮದುವೆಯಾದ ನಂತರ ಸೊಸೆಯರಿಗೆ ಹಳ್ಳಿಗೆ ಬರಲು ಇಷ್ಟವಿಲ್ಲದ ಕಾರಣ ಏನೇನೋ ಕಾರಣ ಕೊಡುತ್ತಿದ್ದರು. ಅತ್ತೆ-ಮಾವನನ್ನು ನೋಡಬೇಕು ಅವರ ಕಷ್ಟ ಸುಖವನ್ನು ವಿಚಾರಿಸುವ ಯಾವ ಗುಣವು ಇರಲಿಲ್ಲ. ವರ್ಷಕ್ಕೆ ಎರಡೂ ಮೂರು ಸಲ ಹಬ್ಬ ಹರಿ ದಿನಕ್ಕೆ ಬಂದು ಹೋಗುತ್ತಿದ್ದರು. 

ಒಂದೆರಡು ವರ್ಷದ ನಂತರ  ಇಬ್ಬರು ಮಕ್ಕಳು ತಮ್ಮ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಅಮೆರಿಕಾಗೆ ಹೋಗಿ ಅಲ್ಲೇ ನೆಲೆಸಿದರು.ಮನಸ್ಸು ಬಂದಾಗ ತಂದೆ-ತಾಯಿಯನ್ನು ನೋಡಿಕೊಂಡು ಹೋಗಲು ಬರುತ್ತಿದ್ದರು. 

ಇವರಿಬ್ಬರನ್ನು ಸದಾ ಉಪಚರಿಸಿ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದವಳು ರಮಣಿ. ಪರಮ್ಮಯ್ಯ ಮತ್ತು  ಅಮ್ಮವ್ರಿಗೆ ಹೆಣ್ಣುಮಕ್ಕಳು ಇಲ್ಲದ ಕಾರಣ ರಮಣಿಯನ್ನು ಎಂದೂ ಕೆಲಸದವರ ಹಾಗೆ ನೋಡಿಕೊಳ್ಳದೆ  ತಮ್ಮ ಮಗಳಂತೆ ನೋಡಿಕೊಳ್ಳುತ್ತಿದ್ದರು.  

“ರಮಣಿ, ನೀನು ಯಾಕೆ ಇನ್ನು ಮದುವೆ ಮಾಡ್ಕೊಂಡಿಲ್ಲ. ವಯಸ್ಸು ಇಪ್ಪತ್ತು ಮೂರಾಗುತ್ತಾ ಬಂದ್ವು ಮುಂದೆ ಗಂಡು ಸಿಗಲ್ಲ ನೋಡು” ಎಂದು ಅಮ್ಮವ್ರು ಹೇಳುವಾಗಲೆಲ್ಲ 
“ಅವ್ವರಾ ನಮ್ಮ ಅಪ್ಪ ಗಂಡು ಹುಡುಕ್ತಾನೆ ಇದ್ದಾನ, ಆದ್ರೆ ನಾನು ಗಂಡನ ಮನೆಗೆ ಹೋದ್ಮೇಲೆ ನಿಮ್ಮನು ಯಾರು ನೋಡ್ಕೋಳೊವ್ರು? ಅದಿಕ್ಕೆ ನಾನು ಒಪ್ಕೋಳ್ತಿಲ್ಲ. ಎಂದು ಹೇಳುತ್ತಾ ಇದ್ದಳು. 

"ಹುಚ್ಚು ಹುಡುಗಿ, ನಾನು ಹೆತ್ತ ಮಕ್ಕಳು ಒಂದೇ ಒಂದು ದಿನ ನಾನು ಬದುಕಿದ್ದೇನ ಎಂದು ಕೇಳೋಕ್ಕೆ ಒಂದು ಫೋನ್ ಮಾಡಿ ಮಾತಾಡ್ಸೋಲ್ಲ ಕಾಗದ ಬರೆಯೋಲ್ಲ ಅಂದ್ಮೇಲೆ ನೀನು ಯಾಕೆ ನಿನ್ನ ಮದುವೆನಾ ಮುಂದೆ ಹಾಕ್ಕೊಂಡು ಇದ್ದೀಯ? ನೋಡು ನಿನಗೆ ಇವಾಗ ಮದುವೆ ವಯಸ್ಸು ಒಂದು ಒಳ್ಳೆಯ ಕಡೆ ನಾವೇ ಸಂಬಂಧ ನೋಡುತ್ತೇವೆ" ಎಂದು ಸದಾ ಹೇಳುತ್ತಿದ್ದರು ಮಾತಿನ ಪ್ರಕಾರ  ಪರಮ್ಮಯ್ಯನವರೇ ಎಲ್ಲ ಖರ್ಚನ್ನು ಭರಿಸಿ ರಮಣಿ ಮದುವೆ ಮಾಡಿ ಕೊಟ್ಟರು. 

ಮೊದಲೇ ಮಕ್ಕಳೊಂದಿಗೆ ಮಾತು ಕತೆ ಅಷ್ಟೊಂದು ಇಲ್ಲ . ಈಗ ರಮಣಿಯು ಇಲ್ಲ ಮನೆಯೆಲ್ಲ ಖಾಲಿ ಆದಂತೆ ಆಗುತಿತ್ತು. ಒಮ್ಮೊಮೆ ಅಮ್ಮೋವ್ರು ಒಬ್ಬರೊಬ್ಬರೇ ಅವರಷ್ಟಕ್ಕೆ ಮಾತನಾಡಿಕೊಳ್ಳುತ್ತಿದ್ದರು. ಮನೆಕೆಲಸ ಮಾಡಲು ಜನರಿದ್ದರು, ತಾವೇ ಸ್ವತಃ  ಮಾಡಿಕೊಳ್ಳುತ್ತಿದ್ದರು. ಇತರ ಕೆಲಸದವರೊಂದಿಗೆ ನಮ್ಮ ರಮಣಿ ಹೀಗೆ, ಹಾಗೆ ಎಂದು ಹೇಳಿ ಹೊಗಳುತ್ತಿದ್ದರು. ಬಿಡುವಿದ್ದಾಗ ರಮಣಿ ಅಮ್ಮೋವ್ರಿಗೆ ಟೆಲಿಫೋನ್ ಮಾಡಿ ಮಾತನಾಡುತ್ತಿದ್ದಳು. 

ಒಂದು ದಿನ ಅಮ್ಮವ್ರು ನೀರಿದ್ದ ನೆಲದ ಮೇಲೆ ಕಾಲಿಟ್ಟು ಜಾರಿ ಬಿದ್ದು, ತಲೆಗೆ ಪೆಟ್ಟಾಗಿ ಹಾಸ್ಪಿಟಲ್ ಸೇರಿದ್ದರು ರಮಣಿ ಒಂದು ವಾರಗಳ ಕಾಲ ಅಮ್ಮೋವ್ರ ಜೊತೆಯಲ್ಲಿದ್ದು ನೋಡಿಕೊಂಡಳು. 
ಮಕ್ಕಳನ್ನು ಅಮೇರಿಕಾದಿಂದ ಕರೆಸಿದ್ದರು. ಒಂದೆರಡು ವಾರಗಳು ಕಳೆಯುತ್ತಿದ್ದಂತೆ ತಲೆಗಾದ ಪೆಟ್ಟು, ಜೊತೆಗೆ ಮದುಮೇಹ ಕಾಯಿಲೆಯಿಂದಾಗಿ ಅವರ ದೇಹ ತುಂಬಾ ಕ್ಷೀಣಿಸಿತ್ತು. ಯಾವ ಔಷಧವು ಉಪಯೋಗಕ್ಕೆ ಬಾರದೇ ಕೊನೆಯುಸಿರೆಳೆದರು. 

ಅಮ್ಮಾವ್ರ ನೆನಪಿನಲ್ಲಿ ಪರಮ್ಮಯ್ಯ ಆಗೋ ಈಗೋ ದಿನಕಳೆಯುತ್ತಿದ್ದರು. ಒಮ್ಮೆ ಅವರು ತಮ್ಮ ಮಕ್ಕಳೊಂದಿಗೆ ಅಮೆರಿಕಕ್ಕೆ ಹೋಗಿದ್ದರು ಆದರೆ,  ಅವರನ್ನು ಹಳ್ಳಿಯವರು ಎಂದು ಸೊಸೆಯಂದಿರು ಕೀಳಾಗಿ ನೋಡಿಕೊಳ್ಳುತ್ತಿದ್ದರು. ಮತ್ತು ಅವರಿಗೆ ಅಲ್ಲಿನ ವಾತಾವರಣ ಅಷ್ಟೊಂದು ಇಷ್ಟವಿರಲಿಲ್ಲ “ಎಲ್ಲೇ ಇದ್ದರೂ ಅದು ನನ್ನ ಊರು, ಸ್ವಂತ ಊರು ಅನ್ನಿಸುವುದಿಲ್ಲ’” ಎಂದು ಪರಮಯ್ಯ ತಮ್ಮ ಮಕ್ಕಳ ಬಳಿ. ಅವರನ್ನು ಊರಿಗೆ ವಾಪಸ್ ಕಳುಹಿಸುವಂತೆ ಕೇಳಿಕೊಂಡರು. ಅವರಿಷ್ಟದ ಪ್ರಕಾರ ಮಕ್ಕಳೆಲ್ಲರೂ ಮನೆಗೆ ಬಂದರು. 

—————————————————————

ಶ್ರೀಲಲಿತಮ್ಮ…. 

“ಓ ಏನು ಸಾಹುಕಾರೆ, ಯಾವ ಕಡೆ ಸವಾರಿ?” 

ಸವಾರಿ ಏನು ಇಲ್ಲಮ್ಮ. ಎಲ್ಲ ಊರ್ಮಿಳನ ಪ್ಲಾನ್ – ವಾಕಿಂಗ್ ಹೋಗಿ ಹೋಗಿ ಅಂತ ಪೀಡಿಸುತ್ತಾಳೆ. 

“ಅದ್ರಲ್ಲೇನು ತಪ್ಪು?  ನಿಮ್ಮ ಆರೋಗ್ಯಕ್ಕೆ ತಾನೇ ಒಳ್ಳೇದು”. 

ಅದು ಹೌದು ಅನ್ನಿ. ಅಂದ ಹಾಗೆ , ಏನು ಲೇಡಿಸ್ ಮೀಟಿಂಗ್ ನಡೀತಾ ಇದೆ ಕಾಣ್ಸುತ್ತೆ?

“ಏನಿದೆ ಹೊಸತ್ತು? ನಮ್ಮ ಮನೆಗೆ ಫೋನ್ ಮಾಡಿದ್ದೆ ಮೊಮ್ಮಕ್ಕಳ ಹತ್ತಿರ ಮಾತನಾಡಿದೆ ಮನಸ್ಸು ಸ್ವಲ್ಪ ಹಗುರಾಯಿತು. ಒಳ್ಳೆ ಸಂಬಂಧ ಬಂತು ಅಂತ ಆ ವೈಯಾರಿಗೆ ನನ್ನ ಮಗನನ್ನು ಕೊಟ್ಟು ಮದುವೆ ಮಾಡಿಸಿದೆ. ಮನೆಗೆ ಬಂದ ಸೊಸೆ, ಮಗನನ್ನು ಬುಟ್ಟಿಗೆ ಹಾಕ್ಕೊಂಡು  ನನ್ನ ಮೇಲೆ ಚಾಡಿ ಹೇಳೋದು. ಏನಾದರೂ ಒಳ್ಳೇದು ಹೇಳೋಕ್ಕೆ ಹೋದರೆ ಜಗಳ ಮಾಡಿ ತವರುಮನೆಗೆ ಹೋಗಿ ಕುತ್ಕೊಳೋದು. ನಾನಿದ್ದರೆ ಅವಳು ಮನೆಗೆ ಕಾಲು ಇಡೋಲ್ಲ ಅಂತ ಹೇಳಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾಳೆ.  ಆದರೆ ಅವರು ದೇಶಾಂತರ ಸುತ್ತುಕೊಂಡು ಶೋಕಿ ಮಾಡಿಕೊಂಡು ಇದ್ದಾಳೆ. 

ಏನೋ ಗಂಡ ದುಡೀತಾನೆ ಅಂತ ಯಾವ್ದೋ ಊರಿಂದ ಏನೇನೋ ಮೇಕ್ಅಪ್ ಡಬ್ಬಿಗಳು, ಬಣ್ಣ ಬಣ್ಣದ  ಪೋಲಿಷ್ ತರೆಸುತ್ತಾಳೆ.  ಪುಡಿ ತಂದು ಹಾಲಿಗೆ ಹಾಕಿ ಮಕ್ಕಳಿಗೆ ಕೊಡ್ತಾಳೆ.ಏನೋ ಡಯೆಟ್ ಅಂತೆ.  ನನ್ನ ಮೊಮ್ಮಗಳಿಗೆ ಬಾಡಿ ಫಿಟ್ ಇರ್ಬೇಕು ಅಂತ ಸರಿಯಾದ ಊಟ ಏನು ಕೊಡಲ್ಲ ಟಿವಿಯಲ್ಲಿ ತೋರ್ಸೋದು ಎಲ್ಲಾನು ತಗೋ ಬಂದು ಕೊಡ್ತಾಳೆ. ಬೆಳೆಯೋ  ಮೊಮ್ಮಕ್ಕಳು ಚೆನ್ನಾಗಿ ಊಟ ತಿಂಡಿ ಮಾಡುದ್ರೆ ನಮಗೆ ಅದೇ ಸಂತೋಷ. 

ಇದರಿಂದನೇ ನಮ್ಮಿಬ್ಬರಿಗೂ ದಿನ ಜಗಳ, ವಾದ. ಮಗ ಹೇಳ್ದ “ಅಮ್ಮ ನಿಮ್ಮಿಬ್ಬರಿಗೂ ಗೋಳು ಬೇಡ ನನಗೋಸ್ಕರ ನೀನು ನಾನು ಹೇಳಿದ ಕಡೆ ಹೋಗಿ  ಇದ್ದುಬಿಡು ವಾರ ವಾರಕ್ಕೆ ಬಂದು ನೋಡ್ಕೊಂಡು ಹೋಗ್ತಿವಿ. ಮಕ್ಕಳನ್ನು ರಜೆ ಇದ್ದಾಗ ಕರ್ಕೊಂಡು ಬರುತ್ತೀನಿ ಎಂದವನು ಆರು ತಿಂಗಳು ಆಯಿತು ಬಂದೆ ಇಲ್ಲ. 

ದಿನ ಮೊಮ್ಮೊಕ್ಕಳ ನೆನಪು ಬರುತ್ತೆ. ನನ್ನನ್ನ ವೃದ್ಧಾಶ್ರಮಕ್ಕೆ ಬಿಟ್ಟು ಅವರ ಅಪ್ಪ- ಅಮ್ಮನನ್ನು ಎಷ್ಟು ಚೆನ್ನಾಗಿ ನೋಡ್ಕೊಳ್ತಾಳೆ ಗೊತ್ತ. ನನ್ನ ಮಗನ ದುಡ್ಡೆಲ್ಲಾ ಹೇಳದೆ ಕೇಳದೆ ಖರ್ಚು ಮಾಡುತ್ತಾಳೆ. ಎಂದು ತನ್ನ ಪ್ರತಿನಿತ್ಯದ ಬವಣೆಗಳನ್ನು ಹೇಳಿ ಮುಗಿಸಲು, ಅಲ್ಲಿದ್ದ ಇನ್ನಿಬ್ಬರು ಅವರವರ ಸೊಸೆಯ ಬಗ್ಗೆ ಮಾತನಾಡಲು ಶುರು ಮಾಡಿದರು.  

ವೃದ್ಧಾಶ್ರಮಗಳ ನಿವಾಸಿಗಳಲ್ಲಿ ಇದು ಸಾಮಾನ್ಯ ಕಥೆಯಾಗಿದೆ, ಅವರು ಆಗಾಗ್ಗೆ ತಮ್ಮ ಕಷ್ಟಗಳನ್ನು, ಮಕ್ಕಳು ಹೇಗೆ ತಮ್ಮನ್ನು ನಡೆಸಿಕೊಂಡರು, ಅವರು ಮಕ್ಕಳಿಗಾಗಿ ಪಟ್ಟ ಶ್ರಮ ಇವೆಲ್ಲನ್ನು  ಪರಸ್ಪರ ಹಂಚಿಕೊಳ್ಳುತ್ತಾರೆ. ಇತರರು ತಮ್ಮ ಕುಂದುಕೊರತೆಗಳನ್ನು ಹಂಚಿಕೊಂಡಾಗ ಆದರೆ, ಪದ್ಮಿನಿಯಮ್ಮ ಯಾವಾಗಲೂ ಮೌನವಾಗಿರುತ್ತಿದ್ದರು. 

ವೃದ್ಧ ನಿವಾಸಿಗಳು ಊಟದ ಸಮಯದವರೆಗೆ ಹರಟೆ ಹೊಡೆಯುತ್ತಿದ್ದರು. ಎಲ್ಲರೂ ಒಟ್ಟಿಗೆ ಊಟದ ಜಾಗಕ್ಕೆ ಹೋದರು. ಎಂದಿನಂತೆ  ಊರ್ಮಿಳಾ ಇತರ ನರ್ಸ್‌ಗಳೊಂದಿಗೆ ರಾತ್ರಿಯ ಔಷಧಿಯನ್ನು ಎಲ್ಲರೂ ಪಡೆದುಕೊಂಡಿದ್ದಾರೆಯೇ ಎಂದು ಪರಿಶೀಲಿಸಿದರು. ಪರಮಯ್ಯನ ಸರದಿ ಬಂದಾಗ, ಔಷಧಿಯನ್ನು ತೆಗೆದುಕೊಂಡು, ಗೋಡೆಯಲ್ಲಿ ನೇತು ಹಾಕಿದ್ದ ತನ್ನ ಮಕ್ಕಳ ಫೋಟೋ ತಂದುಕೊಡುವಂತೆ ಕೇಳಿದರು. 

ಊರ್ಮಿಳಾ ಫೋಟೋವನ್ನು ಕೊಟ್ಟು,  ಪರಮಯ್ಯನಿಗೆ ಗುಡ್ ನೈಟ್ ಹೇಳಿ, ಕೋಣೆಯಿಂದ ಹೊರಟಳು. 

ಒಬ್ಬನೇ ಕುಳಿತಿದ್ದ ಪರಮಯ್ಯ ತನ್ನ ಹೆಂಡತಿ, ಮಕ್ಕಳ ಚಿತ್ರವನ್ನು ನೋಡುತ್ತಾ ತನ್ನ ಹಿಂದಿನ ದಿನಗಳನ್ನು ನೆನಪಿಸಿಕೊಂಡ.

ಅಮೆರಿಕದಿಂದ  ಮನೆಗೆ ಬಂದ ಒಂದೆರಡು ವಾರಕ್ಕೆ ಎಲ್ಲವು ಸರಿಯಾಗೇ ಇತ್ತು. ಮೋಮ್ಮಕ್ಕಳಿಗೆ ಕತೆ ಹೇಳುವುದು, ತೋಟವನ್ನು ಸುತ್ತಿಸುವುದು, ಹಳ್ಳದ ಕಡೆ ಕರೆದುಕೊಂಡು ಹೋಗುವುದು ಹೀಗೆ ಮಕ್ಕಳ ಜೊತೆ ದಿನ ಕಳೆಯುತ್ತಿದ್ದರು. ಸೊಸೆಯರು ತಮ್ಮ ತಮ್ಮ ಗಂಡಂದಿರ ಜೊತೆ ಮಾತನಾಡುವಾಗ ಕನ್ನಡದಲ್ಲಿ ಮಾತನಾಡಿದರೆ ಎಲ್ಲಿ ಪರಮ್ಮಯ್ಯರಿಗೆ ತಿಳಿದು ಬಿಡುತ್ತದೆಯೋ ಎಂದು ಇಂಗ್ಲಿಷ್ನಲ್ಲಿಯೇ ಮಾತನಾಡುತ್ತಿದ್ದರು. ಹೀಗೆ ಊರಿನಲ್ಲಿ ಐದು ಎಕರೆ ಜಾಗದಲ್ಲಿ ಅಣ್ಣ -ತಮ್ಮರಿಬ್ಬರು ಫ್ಯಾಕ್ಟರಿಯನ್ನು ತೆರೆದು ಅಲ್ಲಿರುವ ಬಡ ಮಕ್ಕಳಿಗೆ ಉದ್ಯೋಗಾವಕಾಶ ಕೊಡಿಸುವಂತೆ ಹೇಳಿ ಐದು ಎಕರೆ ಆಸ್ತಿ ಮಕ್ಕಳ ಹೆಸರಿನಲ್ಲಿರಬೇಕು ಎಂದು ತಂದೆಯ ಮನವೊಲಿಸಿ ಒಪ್ಪಿಸುವಂತೆ ಮಾಡಿದರು. . 

“ಅಪ್ಪ ಹೇಗಿದ್ದರೂ ನಾವು ಇಲ್ಲಿ ಫ್ಯಾಕ್ಟರಿ ಕಟ್ಟಿಸುತ್ತಿದ್ದೇವೆಲ್ಲಾ, ಅಮೆರಿಕಾಗೆ ಮತ್ತೆ ಹೋಗಿ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಅಲ್ಲಿಗೆ ಯಾಕೆ ಹೋಗಬೇಕು ಅಲ್ವಾ? ಅದಕ್ಕೆ ನಾವು ಇಲ್ಲೇ ಇದ್ದು ಬಿಡೋಣ ಅಂತ ಅಂದುಕೊಂಡಿದ್ದೇವೆ. 
ಆದರೆ, ಅಷ್ಟು ಸುಲಭವಾಗಿ ಅಮೇರಿಕ ಬಿಟ್ಟುಬರೋದಕ್ಕೆ ಆಗೋದಿಲ್ಲ ನಿಮಗೂ ಗೊತ್ತಲ್ವಾ  ಹಾಗಾಗಿ ನಾವು ಎರಡು ತಿಂಗಳ ಮಟ್ಟಿಗೆ ಅಲ್ಲಿಗೆ ಹೋಗಿ ನಮ್ಮ ಬಟ್ಟೆ,  ವಸ್ತು ಸಾಮಗ್ರಿಗಳನ್ನು, ಮತ್ತು ಮಕ್ಕಳ ಶಾಲೆಯ ವರ್ಗಾವಣೆ ಪತ್ರವೆಲ್ಲ ತರಬೇಕು. ಹಾಗಾಗಿ ನೀವು ಒಂದೆರಡು ತಿಂಗಳ ಮಟ್ಟಿಗೆ ವಾಯೋಧಾಮದಲ್ಲಿ ಉಳಿದುಕೊಳ್ಳಿ. ನಾವು ಅಮೆರಿಕಾದಿಂದ ಬಂದ  ತಕ್ಷಣ ನಿಮ್ಮನ್ನು ಮತ್ತೆ ಮನೆಗೆ ಕರೆದುಕೊಂಡು ಬರುತ್ತೇವೆ” ಎಂದು ಭರವಸೆಯ ಮಾತುಗಳನ್ನು ಹೇಳಿದರು. 
ಪರಮ್ಮಯ್ಯನವರು ಮಕ್ಕಳು ಮಾಡುತ್ತಿರುವ ಯಾವ ಪಿತೂರಿಯನ್ನು ತಿಳಿಯದೇ ಸಂಪೂರ್ಣ ಮನೆ ಹಾಗು ಆಸ್ತಿ ಪತ್ರಗಳ ಮೇಲೆ ಸಹಿ ಹಾಕಿದರು

ಪರಮಯ್ಯ ಫೋಟೋವನ್ನು ನೋಡುತ್ತಲೇ ನಿದ್ರೆಗೆ ಜಾರಿದರು.

ಬೆಳಗ್ಗೆ ಪರಮ್ಮಯ್ಯನ ಇಬ್ಬರು ಮಕ್ಕಳಾದ ಸತೀಶ್ ಮತ್ತು ನವೀನ್ ಅನಿರೀಕ್ಷಿತವಾಗಿ ವೃದ್ಧಾಶ್ರಮಕ್ಕೆ ಆಗಮಿಸಿದ್ದರು. ಊರ್ಮಿಳಾ ಪರಮ್ಮಯ್ಯನವರ ಕೋಣೆಗೆ ಹೋಗಿ, “ಸಾರ್, ನಿಮ್ಮ ಮಕ್ಕಳು ನಿಮ್ಮನ್ನು ನೋಡಲು ಬಂದಿದ್ದಾರೆ ನನ್ನೊಂದಿಗೆ ಬನ್ನಿ, ಎಂದು ಹೊರಗೆ ಕರೆದೊಯ್ದಳು. ಒಂದು ವರ್ಷದ ನಂತರ ಯಾವುದೇ ಮುನ್ಸೂಚನೆಯಿಲ್ಲದೆ ತನ್ನ ಮಕ್ಕಳನ್ನು ನೋಡಿದ ಪರಮ್ಮಯ್ಯನಿಗೆ ಸಂತೋಷ ಮತ್ತು ಸ್ವಲ್ಪ ಗಾಬರಿಯಾಯಿತು “ಅಪ್ಪಾ, ನಮ್ಮ ಮಕ್ಕಳಿಗೆ ರಜೆ ಇದ್ದುದರಿಂದ ನಿನ್ನನ್ನು ನೋಡಿಕೊಳ್ಳಲು ಬಂದಿದ್ದೇವೆ. ಮನೆಗೆ ಹೋಗೋಣ” ಎಂದು ಹೇಳುತ್ತಿರುವಾಗಲೇ ಅಲಾರ್ಮ್ ರಿಂಗಣಿಸಿ ಥಟ್ಟನೆ ಎಚ್ಚರವಾಯಿತು. ಇದು ಕನಸು ಎಂದು ಅವರಿಗೆ ಅರಿವಾಯಿತು

ಎರಡಲ್ಲ ಒಂದು ವರ್ಷವಾಗಿತ್ತು. ಮಕ್ಕಳು ಊರಿಗೆ ಬಂದಿದ್ದಾರೆ ಎಂಬ ವಿಷಯವು ತಿಳಿದಿತ್ತು ಆದರೆ ಒಬ್ಬರು ತಂದೆಯನ್ನು ಇಣುಕಿ ನೋಡಲು ಬಂದಿರಲಿಲ್ಲ. ಯಾವ ಪತ್ರಕ್ಕೂ ಉತ್ತರವಿಲ್ಲ. ಟೆಲಿಫೋನ್ ಮಾಡಿರಲಿಲ್ಲ. 

ಮೊದಮೊದಲು ಊರ್ಮಿಳಾಳ ಕೊಠಡಿಯ ಮುಂದೆಯೇ ಕಾರಿಡಾರ್‌ನ ಪಕ್ಕದ ಕುರ್ಚಿಯಲ್ಲಿ ಕುಳಿತು ಪ್ರತಿ ಹತ್ತು ನಿಮಿಷಕ್ಕೊಮ್ಮೆ ತನ್ನ ಮಕ್ಕಳಿಂದ ಏನಾದರೂ ಸುದ್ದಿ ಇದೆಯೇ ಎಂದು ಕೇಳುತ್ತಿದ್ದರು. 

ಪ್ರತಿಸಲ ಊರ್ಮಿಳಯಿಂದ ಬರುತ್ತಿದ್ದ ಉತ್ತರ “ಸರ್ ಯಾರು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಯಾರಾದರೂ ಏನಾದರೂ ಮಾತನಾಡಿದರೆ ಖಂಡಿತವಾಗಿ ತಿಳಿಸುತ್ತೇನೆ ನೀವು ದಯವಿಟ್ಟು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಸರಿಯಾದ ಸಮಯಕ್ಕೆ ಆಹಾರ, ಮಾತ್ರೆಯನ್ನು ತೆಗೆದುಕೊಂಡು  ಎಂದು ಹೇಳುತ್ತಿದ್ದಳು. 

ಮಕ್ಕಳ ನಿರ್ಲಕ್ಷ್ಯದಿಂದ ಪರಮ್ಮಯ್ಯನವರ ಆರೋಗ್ಯ ತೀರಾ ಹದಗೆಟ್ಟಿತ್ತು. ಅವನ ಕಣ್ಣಿನ ದೃಷ್ಟಿಯು ಕೊಂಚ ಮಂಜಾಗಿದ್ದವು. ಹೆಚ್ಚು ಸಮಯ ಒಂಟಿಯಾಗಿರಲು ಅಪೇಕ್ಷಿಸುತಿದ್ದರು. ಆದರೆ  ವೃದ್ಧಾಶ್ರಮದಿಂದ ಸ್ನೇಹಿತರು ಆಗಾಗ್ಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆಯುತ್ತಿದ್ದರು ಮತ್ತು ಪದ್ಮಿನಿ ಅವರಿಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. 

ಕೆಲವೊಮ್ಮೆ ಊರ್ಮಿಳಾ ವೃದ್ಧಾಶ್ರಮಕ್ಕೆ ತನ್ನ ಮಕ್ಕಳನ್ನು ಕರೆತಂದು ಇತರ ಹಿರಿಯರೊಂದಿಗೆ  ಮಾತನಾಡಿಸುತ್ತಿದ್ದಳು. ಇದರಿಂದ ಅವರಿಗೆ ಸ್ವಲ್ಪ ಸಮಾಧಾನ ಮತ್ತು ಸಂತೋಷವಾಗುತ್ತಿತ್ತು  ಹಿರಿಯರನ್ನು ಕ್ರಿಯಾಶೀಲವಾಗಿರಲು  ಊರ್ಮಿಳಾ ಮತ್ತು ಅವರ ತಂಡವು ಸೇರಿ  ಕೆಲವೊಂದು ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಇಡುತ್ತಿದ್ದರು. 

ಒಂದು ದಿನ ಪರಮ್ಮಯ್ಯನ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಯಾವುದೋ ಕಾರಣದ ನಿಮಿತ್ತ ಪೇಟೆಗೆ ಬಂದಿದ್ದರು ಹಾಗೆಯೇ ಪರಮಯ್ಯನವರನ್ನು ನೋಡಲು ವಾಯೋಧಾಮಕ್ಕೆ ಬಂದಿದ್ದರು. ಪರಮಯ್ಯನನ್ನು ನೋಡಿ “ಅಯ್ಯ ನಿಮಗೆ ಈ ರೀತಿ ಪರಿಸ್ಥಿತಿ ಬರುತ್ತದೆ ಎಂದು ನಾನು ಯಾವತ್ತೂ ಕಂಡಿರಲಿಲ್ಲ, ನಿಮ್ಮ ಮಕ್ಕಳು ನಿಮ್ಮ ಆಸ್ತಿಯನ್ನೆಲ್ಲ ಅವರ ಹೆಸರಿಗೆ ಮಾಡಿಸಿ, ಊರಿನ ಮಕ್ಕಳಿಗೆ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ನಮ್ಮನ್ನು ವಂಚಿಸಿದ್ದಾರೆ. ನಮಗೆ ದುಡಿಯುವುದಕ್ಕೆ ಗೊತ್ತಿದ್ದ ಒಂದೇ ದಾರಿಯೆಂದರೆ ವ್ಯವಸಾಯ ಆದರೆ ನಾವು, ನೀವು ಸೇರಿ ಹಾಕಿದ್ದ ಅದೆಷ್ಟೋ ಹಣ್ಣಿನ ಮರಗಳನ್ನು, ಫಲವತ್ತಾಗಿ ಬೆಳೆ ಕೊಡುತ್ತಿದ್ದ ಗದ್ದೆ ಭೂಮಿಯನ್ನು ಬರಡು ಮಾಡುತ್ತಿದ್ದಾರೆ ಎಂದು ಹೇಳಿ ಅತ್ತು ಹೊರಟರು.

ಪರಮ್ಮಯ್ಯನವರಿಗೆ ಈ ವಿಷಯ ಕೇಳಿ ನೋವಾಯಿತು. ಪಕ್ಕದಲ್ಲಿದ್ದ ಪದ್ಮಿನಿಯವರಿಗೆ “ ನೋಡಿದ್ರ ಪದ್ಮಿನಿಯವರೇ, ನನ್ನ ಮಕ್ಕಳಿಗೆ ನನ್ನ ಈಡೀ ಆಸ್ತಿಯನ್ನು ಬರೆದುಕೊಟ್ಟೆ, ಆದರೆ ಅದನ್ನು ಹೇಗೆ ಪೋಷಿಸಬೇಕು ಎಂಬುವುದು ಅವರಿಗೆ ಗೊತ್ತಿಲ್ಲ. ನಮ್ಮದೇನೂ ಕಾಲ ಮುಗಿಯುತ್ತ ಬಂತು, ಇಂದು ಅಥವಾ ನಾಳೆ ನಾವು ಈ ಲೋಕವನ್ನು ಬಿಟ್ಟು ಹೋಗುತ್ತೇವೆ. ಸಾಯುವಾಗ ನಾವೇನು ತೆಗೆದುಕೊಂಡು ಹೋಗುವುದಿಲ್ಲ. ಆದರೆ ಅವರಿಗೆ ಈ ಪರಿಸರ, ಈ ಹಸಿರ ವಾತಾವರಣದ ಮೇಲೆ ಒಂದಿಷ್ಟು ಕಾಳಜಿ ಇಲ್ಲ. ನಾನು ನನ್ನ ತಂದೆಯ ಜೊತೆ ಸೇರಿ ಹಾಕಿದ ಗಿಡಗಳು ನನ್ನ ಮಕ್ಕಳ ಕಾಲಕ್ಕೆ ಹಣ್ಣುಗಳನ್ನು ಕೊಡುತ್ತಿದ್ದ ಮರಗಳಾಯಿತು. ಪಟ್ಟಣದಲ್ಲೇ ಬಿದ್ದಿದ್ದ ನನ್ನ ರಾಕ್ಷಸ ಮಕ್ಕಳಿಗೆ ಏನು ಗೊತ್ತು? ನಾನು ಆ ಮರಗಳನ್ನು ಎಷ್ಟು ಚೆನ್ನಾಗಿ ಪೋಷಿಸುತಿದ್ದೆ. ನನ್ನ ಹೆಂಡತಿ ಮತ್ತು ನಾನು ಮರಗಳು ಮತ್ತು ಗಿಡಗಳೊಂದಿಗೆ ಮೌನ ಹರಟೆಯಲ್ಲಿ ಲೆಕ್ಕವಿಲ್ಲದಷ್ಟು ದಿನಗಳನ್ನು ಕಳೆಯುತ್ತಿದ್ದೆವು. ಅವಳು ತೀರಿಕೊಂಡಾಗ, ನಮ್ಮ ಮಕ್ಕಳು ಎಷ್ಟು ಹೃದಯಹೀನ ಮತ್ತು ಕ್ರೂರವಾಗಿದ್ದಾರೆಂದು ಅವಳಿಗೆ ತಿಳಿದಿರಲಿಲ್ಲ. ಅವರ ನಿಜವಾದ ಬಣ್ಣಗಳನ್ನು ನೋಡುವ ಮೊದಲು, ಅವಳು ಭಗವಾನ್ ಶಿವನ ಪಾದ ಸೇರಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಅದೇ ಸ್ವಲ್ಪ ಸಮಾಧಾನ ನನಗೆ. ” ಎಂದು ಉದ್ಗರಿಸಿ ಕೆನ್ನೆಗಳಲ್ಲಿ ಕಣ್ಣೀರು ಗಳಗಳನೆ ಹರಿಯಿತು.

ಪದ್ಮಿನಿಯವರು “ನೀವು ಹೇಳಿದ್ದು ನಿಜ  ನಾನು ನನ್ನ ತಂದೆ ತಾಯಿಯ ಮಾತನ್ನು ಕೇಳಿ ಅದರಂತೆಯೇ ನಡೆದುಕೊಂಡಿದ್ದರೆ, ಇವತ್ತು ಎಲ್ಲೋ ಇರುತ್ತಿದ್ದೆ. 
ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದವಳು ನಾನು, ಮದುವೆಯ ವಿಷಯದಲ್ಲಿ ಅವರ ಮಾತನ್ನು ಕೇಳದೆ, ನನ್ನ ಆಸೆಯ ಪ್ರಕಾರ ನಾನು ಒಬ್ಬರನ್ನು ಪ್ರೀತಿಸಿ ಮದುವೆಯಾದೆ. ಹೆತ್ತವರ ಮಾತು ಮೀರಿದ ಕಾರಣ ನಾನು ಅವರಿಂದ ದೂರವೇ ಇದ್ದೆ. ಮದುವೆಯಾಗಿ ಒಂದು ವರ್ಷವಾದ ಮೇಲೆ  ನನಗೆ ತಿಳಿದದ್ದು, ನಾನು ಮದುವೆಯಾದ ವ್ಯಕ್ತಿಗೆ ಹೀಗಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂದು. 
ಆ ವ್ಯಕ್ತಿ ನನ್ನ ಆಸ್ತಿಯ ಆಸೆಗೆ ನನ್ನನ್ನು ಪ್ರೀತಿ ಮಾಡುವ ನೆಪದಲ್ಲಿ ವಂಚಿಸಿ ಮದುವೆಯಾಗಿದ್ದ. ಅಷ್ಟೊತ್ತಿಗಾಗಲೇ, ನಾನು  ಆರು ತಿಂಗಳ ಗರ್ಭಿಣಿ ನಾನು ಮಾಡಿದ ಪಾಪಕ್ಕೆ ನನ್ನ ಮಗುವಿಗೆ ಶಿಕ್ಷೆಯಾಗಬಾರದು ಎಂದು ಮತ್ತೆ ನನ್ನ ತವರು ಮನೆಗೆ ಹೋಗಿ ನನ್ನ ತಂದೆ ತಾಯಿಯ ಬಳಿ ಕ್ಷಮೆ ಕೇಳಿ ನನ್ನನ್ನು ಮನೆಗೆ ಸೇರಿಸಿಕೊಳ್ಳುವಂತೆ ಕೇಳಿಕೊಂಡೆ. ಒಬ್ಬಳೇ ಮಗಳು ಹೇಗೆ ತಾನೇ ನನ್ನನ್ನು  ಆ ಸ್ಥಿತಿಯಲ್ಲಿ  ಬಿಡುತ್ತಾರೆ ? ನನ್ನ ತಾಯಿ ನನನ್ನು ಮತ್ತೆ ಮನೆ ತುಂಬಿಸಿಕೊಂಡರು ಆದರೆ ನನ್ನ ತಂದೆಗೆ ನನ್ನ ಮೇಲೀನ ಕೋಪ ಅವರು ಸಾಯುವವರೆಗೂ ಕಡಿಮೆಯಾಗಿರಲಿಲ್ಲ. ಬೇರೆ ಮದುವೆ ಮಾಡಿಕೊಳ್ಳಲು ಮನೆಯಲ್ಲಿ ಒತ್ತಾಯಿಸಿದರು ಆದರೆ ನಾನು ನನ್ನ ಮಗಳ ಭವಿಷ್ಯ ಚೆನ್ನಾಗಿರಬೇಕು ಎಂದು ಬೇರೆ ಮದುವೆಗೆ ಒಪ್ಪಿಕೊಳ್ಳಲಿಲ್ಲ ಹಾಗಾಗಿ  ನನ್ನ ತಂದೆ ಅವರ ಕೊನೆಗಾಲದಲ್ಲಿ ವಕೀಲರನ್ನು ಕರೆಯಿಸಿ  ಆಸ್ತಿಯನೆಲ್ಲ ನನ್ನ ಮಗಳ ಹೆಸರಿಗೆ ಮಾಡಿಸಿದರು. 
ಮಗಳ ವಿದ್ಯಾಭ್ಯಾಸ ಮುಗಿಸಿದ  ನಂತರ ಒಳ್ಳೆಯ ವರನಿಗೆ ಕೊಟ್ಟು ಮದುವೆ ಮಾಡಿದೆ ಅವನಿಗೆ ನನ್ನ ಮಗಳಿಗಿಂತ ಅವಳ ಹತ್ತಿರವಿರುವ ಆಸ್ತಿ ಐಶ್ವರ್ಯದ ಮೇಲೇನೆ ಕಣ್ಣು. ಇದೆಲ್ಲ ನನ್ನ ಮಗಳಿಗೆ ಅರ್ಥವಾಗೋದೇ ಇಲ್ಲ. ಗಂಡ ಹೇಳಿದ್ದು, ಮಾಡಿದ್ದು ಎಲ್ಲವು ಸರಿಯೇ ಎಂದು ವಾದಿಸುತ್ತಾಳೆ. ಮದುವೆಯಾದ ಸ್ವಲ್ಪ ವರ್ಷ ಯಾವ ಕಿರಿಕಿರಿ ಇರಲಿಲ್ಲ. ಮೊಮ್ಮಕ್ಕಳನ್ನು ನನ್ನ ಮನೆಯಲ್ಲೇ ನಾನೇ ಸಾಕಿ ಬೆಳೆಸಿದೆ. ಮೊಮ್ಮಕ್ಕಳು ದೊಡ್ಡವರಾಗಿ ಕಾಲೇಜು ಮೆಟ್ಟಿಲೇರುತ್ತಿದ್ದಂತೆಯೇ ನನ್ನ ಅವಶ್ಯಕತೆ ಇಲ್ಲವೆಂದು ಅವರಿಗೆ ತಿಳಿಯಿತು. ಹಳೆಯ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟಿಸಿದರು. ಮೊಮ್ಮಕ್ಕಳನ್ನು ಬೇರೆ ದೇಶಕ್ಕೆ ಓದಲು ಕಳುಹಿಸಿದರು. ನಾನು ಮನೆಯಲ್ಲಿ ಒಬ್ಬಳೇ ಇರುತ್ತಿದ್ದೆ. 

ಅಳಿಯ ನನ್ನನು ಹೇಗಾದರೂ ಮನೆಯಿಂದ ಓಡಿಸಿ, ಆತನ ತಂದೆ ತಾಯಿಯನ್ನು ಕರೆದುಕೊಂಡು ಈ ದೊಡ್ಡ ಮನೆಯಲ್ಲಿ ಇರಬೇಕು ಎನ್ನುವ ದುರಾಸೆ. ಹೇಗಿದ್ದರೂ ನನ್ನ ಹತ್ತಿರ ಯಾವ ಆಸ್ತಿ-ಪಾಸ್ತಿಯಿಲ್ಲ. ಅದು ನನ್ನದೇ ಮನೆಯಾದರೂ ಪ್ರತಿ ದಿನ ಆತ ನನ್ನನ್ನು ನಾಯಿಯಂತೆ ಹಂಗಿಸುತ್ತಿದ್ದ. ನಾನು  ಏನಾದರೂ ತಿಂದರೆ ತಟ್ಟೆ ನೋಡುವುದು, ಹೊಸ ಬಟ್ಟೆ ತೆಗೆದುಕೊಂಡರೆ ಆತನಿಗೆ ಏನೋ ಹೊಟ್ಟೆ ಉರಿ. ನಾನು ಏನು ಮಾಡಿದರು ತಪ್ಪು ಹೀಗೆ ಎರಡು ಮೂರು ಬಾರಿ ಮಗಳಲ್ಲಿ ನನ್ನ ದುಃಖವನ್ನು ಹೇಳಿಕೊಂಡಿದ್ದೆ ಆದರೆ ಅವಳು 

“ಅಮ್ಮ, ನೀನು ಯಾವತ್ತೂ ಒಳ್ಳೆಯ ಮದುವೆಯಾಗಿ ಸಂಸಾರ ನಡೆಸಿದವಳಲ್ಲ, ನಿನ್ನ ಮಾತಿಗೆ ಕಿವಿಗೊಟ್ಟು ನನ್ನ ಸಂಸಾರವನ್ನು ಹಾಳು  ಮಾಡಿಕೊಂಡು ನಿನ್ನ ಹಾಗೆ ತವರು ಮನೆಯಲ್ಲಿ ಕೂರುವ ಆಸೆ ನನಗಿಲ್ಲ. ಗಂಡ- ಹೆಂಡತಿಯ ನಡುವೆ ತಂದು ಹಾಕಬೇಡ. ಆಸ್ತಿ ನನ್ನ ಹೆಸರಿನಲ್ಲಿರಬಹುದು, ಆದರೆ ಈ ಮನೆಯಲ್ಲಿ ನಿನಗೆ ಬೇಕಾದನ್ನು ಮಾಡಲು ಸ್ವಾತಂತ್ರ್ಯವಿದೆ. ದಯವಿಟ್ಟು ನಾವು ಮಾಡಲು ಹೊರಟಿರುವ ಯಾವ ಒಳ್ಳೆಯ ವಿಷಯಗಳಲ್ಲಿ ನೀನು ತಲೆ ಹಾಕಬೇಡ ಅಂತ  ಕಟುರವಾಗಿ ಹೇಳಿ ಬಿಟ್ಟಳು. 
ಅದಕ್ಕೆ ನಾನಾಗೆ ನನ್ನ ಮಗಳಿಗೆ, "ಮಗಳೇ ನನ್ನನ್ನು ಎಲ್ಲದರೂ ವೃದ್ಧಾಶ್ರಮಕ್ಕೆ ಸೇರಿಸಿಬಿಡು ನನ್ನ ಪಾಡಿಗೆ ನಾನಿರುತ್ತೇನೆ" ಎಂದು ಸ್ವತಃ ನಾನೇ ಇಲ್ಲಿಗೆ ಬಂದಿದ್ದೇನೆ. ಇಲ್ಲಿರುವವರೆಲ್ಲ ತಮ್ಮ ತಮ್ಮ ಸೊಸೆಯನ್ನು ದೂರುತ್ತಾರೆ. ಆದರೆ ನಾನು ನನ್ನ ಮಗಳನ್ನು ದೂಷಿಸುವುದಕ್ಕೆ ಮನಸ್ಸು ಬರಲ್ಲ. ಹೆತ್ತು ಹೊತ್ತು ಸಾಕಿದ್ದೇನೆ. ಒಂದಲ್ಲ ಒಂದು ದಿನ ತಾಯಿ ಪ್ರೀತಿ ಎಂದರೆ ಏನು ಅಂತ ಗೊತ್ತಾಗುತ್ತೆ ಎಂದು ಪದ್ಮಿನಿಯಮ್ಮ ತಮ್ಮ ನೋವನ್ನು ಹೇಳಿಕೊಂಡರು. 

——————————————————

ಎರಡು ವರ್ಷಗಳಾದವು ಏನು ಬದಲಾಗಲಿಲ್ಲ.ಪರಮ್ಮಯ್ಯನವರಿಗೆ ಎಂಭತ್ತಾರು ವರ್ಷಗಳಾಗಿದ್ದವು.  ವಾಯೋಧಾಮದ ಸ್ವಚಂದ ಗಾಳಿಯು ಅವರಿಗೆ ಕುತ್ತಿಗೆ ಹಿಸುಕುವಂತಾಗುತ್ತಿತ್ತು. “ಊರ್ಮಿಳ, ಹೇಗಾದರೂ ನನ್ನ ಇಲ್ಲಿಂದ ಹೊರಗೆ ಕಳುಹಿಸು ಈ ವೃದ್ದಾಶ್ರಮದ ವಾತಾವರಣ ನನಗೆ ಭಯ ಹುಟ್ಟಿಸುತ್ತಿದೆ ನನಗೆ ಇಲ್ಲಿ ಸಾಯಲು ಇಷ್ಟವಿಲ್ಲ”  ಎಂದು ಪ್ರತಿನಿತ್ಯವೂ ಹೇಳುತ್ತಿದ್ದರು. 

ಪರಮಯ್ಯನವರಿಗೂ ಇದು ಅಸಾಧ್ಯವೆಂದು ತಿಳಿದಿತ್ತು ಆದರೆ ಅವರಿಗೆ ಪಂಜರದಲ್ಲಿರುವ ಪಕ್ಷಿಯಂತೆ ಅನ್ನಿಸತೊಡಗಿತು. ಹೊರಗಿನಿಂದ, ಊರಿನಿಂದಾಗಲಿ ಯಾರು ಬಂದು ಅವರನ್ನು ಕಾಣುವವರಿಲ್ಲವಲ್ಲ. ವಾಯೋಧಾಮದಲ್ಲಿದ್ದ ಇತರ ಸಹ ಮಿತ್ರರೊಂದಿಗೆ ತಮ್ಮ ಕಷ್ಟ-ಸುಖ, ದುಃಖಗಳನ್ನು ಅಂಚಿಕೊಂಡು ಆತ್ಮಿಯರಾಗಿದ್ದರು.  ಪರಮಯ್ಯ, ಪದ್ಮಿನಿಯಮ್ಮನವರನ್ನು ಸ್ನೇಹದ ಸಲುಗೆಯಿಂದ “ಪದ್ದಿ ” ಎಂದು ಕರೆಯುತ್ತಿದ್ದರು. ಒಬ್ಬರಿಗೊಬ್ಬರು ಕಾದಂಬರಿಯನ್ನು ಓದಿ ಹೇಳುವುದು, ಕೆಲವೊಂದು ವಿಚಾರಗಳ ಬಗ್ಗೆ ಪರ, ವಿರೋಧವಾಗಿ ಚರ್ಚಿಸುವುದು. . 

ಇಬ್ಬರು ತಮ್ಮ ತಮ್ಮ ಮಕ್ಕಳು ಮಾಡಿದನ್ನು ಮರೆತು ವಾಯೋಧಾಮದಲ್ಲಿ ತಮ್ಮದೇ ಲೋಕದಲ್ಲಿ ಅಳಿಗುಣಿ ಮನೆಯಾಟ, ಕಥೆ ಪ್ರಸಂಗ, ಮತ್ತು ಇತರ ವೃದ್ಧರೊಂದಿಗೆ ಸೇರಿ ಚಿತ್ರಗೀತೆಗಳನ್ನು ಹಾಡುವುದು ಇದುವೇ ಜೀವನವಾಗಿತ್ತು. 

ಒಂದು ದಿನ ಒಬ್ಬ ಹೆಂಗಸು ಎರಡು ಹೆಣ್ಣು ಮಕ್ಕಳನ್ನು ಕರೆದುಕೊಂಡು ತನ್ನ ಗಂಡನೊಂದಿಗೆ  ವಾಯೋಧಾಮಕ್ಕೆ ಬಂದಳು. 

ಊರ್ಮಿಳಾ ಅವರನ್ನು “ಯಾರು ಬೇಕು?” ಎಂದು ವಿಚಾರಿಸಿದಾಗ, “ಇಲ್ಲಿ ಪರಮಯ್ಯನವರು ಇದ್ದಾರೆಯೇ? ಅವರನ್ನು ನೋಡಲು ಬಂದಿದ್ದೇನೆ” ಎಂದು ಹೇಳಿದಳು. 

ಊರ್ಮಿಳಾ ಪರಮಯ್ಯನನ್ನು ಕರೆದುಕೊಂಡು ಬಂದು, “ಸಾರ್, ನಿಮ್ಮನ್ನು ನೋಡಲು ಯಾರೋ ಬಂದಿದ್ದಾರೆ ನೋಡಿ” ಎಂದು ಕರೆದುಕೊಂಡು ಬಂದರು. 

ಮೊದಲೆರಡು ನಿಮಿಷ ಪರಿಚಯ ಸಿಗಲಿಲ್ಲವಾದರೂ, ಕನ್ನಡಕವನ್ನು ಸರಿ ಮಾಡುತ್ತಾ ಜ್ಞಾಪಿಸಿಕೊಂಡು, “ಅಲಲೆ ನೀನು ನಮ್ಮ ರಮಣಿ ಅಲ್ವೇ”? ಎಷ್ಟು ವರ್ಷವಾಯಿತು ನಿನ್ನನು ನೋಡದೆಲೇ, ಇವರಿಬ್ಬರು ನಿನ್ನ ಮಕ್ಕಳೇನು? ಮೊದಮೊದಲು ನೀನು ನಮ್ಮ ಮನೆಗೆ ಬಂದಾಗ ನೀನು ಇವರಷ್ಟೇ ಇದ್ದೆ. ನಿಮ್ಮ ಅಮ್ಮೋವ್ರು ಇದ್ದಿದ್ದರೆ ನಿನ್ನನ್ನು ನೋಡಿ ತುಂಬಾ ಖುಷಿ ಪಡುತ್ತಾ ಇದ್ದರು. ಏನು ಮಗಳೇ ಇಲ್ಲಿಯ ವರೆಗೆ ಬಂದಿದ್ದೀಯಾ?”  ಎಂದು ಕೇಳಲು 

“ನಿಮ್ಮನ್ನು ನೋಡೋದಕ್ಕೆ ಇಲ್ಲಿಯ ವರೆಗೆ ಬಂದೆ ಅಪ್ಪಯ್ಯ”. ಎಂದು ಅತ್ತಳು. “ಯಾಕೆ ಮಗಳೇ ಅಳುತ್ತೀಯಾ, ಏನಾಯ್ತೆ?” ಎಂದು ಕೇಳುತ್ತಿರಲು,

ಅಷ್ಟೊತ್ತಿಗೆ ಪದ್ಮಿಯಮ್ಮನವರು ಮತ್ತು ಇತರ ಸಹ  ಮಿತ್ರರು ಅಲ್ಲಿಗೆ ಬಂದರು. “ ಪೆದ್ದಿ, ನಾನು ಹೇಳ್ತ ಇದ್ದೆ ಅಲ್ವ ಇವಳೇ ನಮ್ಮ ರಮಣಿ . ನನ್ನ ಮಗಳು ಇದ್ದ ಹಾಗೆ ಎಂದು ಪರಿಚಯಿಸಿ ಮಾತಾನಾಡಿಸಿದರು. 

“ಯಾಕಪ್ಪಯ್ಯ ನೀನು ನಮ್ಮ ಮನೆಗೆ ಬಂದು ಇದ್ದು ಬಿಡಬಾರ್ದು? ನಾನು ನಿನ್ನ ಚೆನ್ನಾಗಿ ನೋಡ್ಕೊಳ್ತೀನಿ ನಿನಗೆ ಏನು ಕಷ್ಟ ಕೊಡಲ್ಲ . ನನ್ನ ಮಕ್ಕಳಿಗೆ ನಿಮ್ಮ ಮತ್ತೆ ಅಮ್ಮೋವ್ರ ಬಗ್ಗೆ ದಿನ ಹೇಳ್ತ ಇರ್ತಿನಿ ನಿಮ್ಮನ್ನು ನಾನು ಈ ಸ್ಥಿತಿಯಲ್ಲಿ ಯಾವತ್ತೂ ನೋಡಿಲ್ಲ. 

ನಾನು ನಿನ್ನನ ಕರೆದುಕೊಂಡು ಹೋಗೋಕ್ಕೆ ಯಾವತ್ತೋ ಇಲ್ಲಿಗೆ ಬರಬೇಕು ಅನ್ಕೊಂಡು ಇದ್ದೆ ಆದರೆ ಸರಿಯಾದ ಸಮಯ ಇವಾಗ ಬಂದಿದೆ. ನಿನ್ನ ಮಗಳು ರಮಣಿ  ಕರೀತಾ ಇದ್ದೇನೆ ಬಾ ಅಪ್ಪಯ್ಯ ನಮ್ಮ ಜೋತೆನೇ ಇದ್ದುಬಿಡು. ನನ್ನ ಪಾಲಿನ ದೇವರು ನೀನು. ನೀನು ನಮ್ಮ ಜೊತೆ ಇದ್ದಾರೆ ನಮಗೆ ಏನು ತೊಂದರೆ ಇಲ್ಲ”

“ರಮಣಿ ನೀನು ಹೇಳೋದು ಸರಿ ಆದರೆ ನಿನಗ್ಯಾಕೆ ಈ ಮುದುಕನ ಗೋಳು? ನೀನು ಮನಸ್ಸುಪೂರ್ತಿಯಾಗಿ ಕರೆಯುತ್ತಿರಬಹುದು ಆದರೇ ಅಲ್ಲಿಗೆ ಬಂದು ನಿನ್ನ ಸಂಸಾರ ಆಳು ಮಾಡಲ್ಲ ತಾಯಿ ನಾನು. ನನ್ನ ಹತ್ತಿರ ನಿನಗೆ ಕೊಡೋದಕ್ಕೆ ಏನು ಇಲ್ಲ, ಸಾಧ್ಯವಾದ್ರೆ ಬಿಡುವಿದ್ದಾಗ ಬಂದು ಹೋಗುತ್ತಾ ಇರು ಅದಷ್ಟೇ ಸಾಕು” ಎಂದು ಹೇಳಿದರು.  

ಪದ್ಮಿನಿಯಮ್ಮನವರು, “ನೀವು ಯಾವಾಗಲೂ ಇಲ್ಲಿಂದ ಹೊರಗಡೆ ಹೋಗಬೇಕು ಎಂದು ಬಯಸುತ್ತಿದ್ದವರು. ಈ ಗೋಡೆಗಳ ಆಚೆಗಿನ ಜಗತ್ತನ್ನು ನೋಡಬೇಕೆಂದು ನಿನಗೆ ಎಷ್ಟು ಆಸೆಯಿದೆ ಎಂದು ನನಗೆ ಗೊತ್ತು. ಈಗ ರಮಣಿ ನಿಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗೋಕ್ಕೆ ಬಂದರೆ ನೀವು ಯಾಕೆ ಹೋಗಲ್ಲ  ಎನ್ನುತ್ತೀರಿ?” ಕೇಳಿದರು. 

ಪದ್ದಿ, ನಾನು ಹೋದರೆ ನೀನು ಹೇಗೆ ಇರುತ್ತೀಯಾ? ನಿನಗೆ ಎಷ್ಟೇ ಒಳ್ಳೆಯ ಗೆಳತಿಯರು ಇದ್ದರು ನಿನಗೆ ನನ್ನ ಮೇಲೆ ಇರುವ ಗೌರವ, ಸ್ನೇಹ ನೀನು ತೋರಿಸುವ ಕಾಳಜಿ ಎಲ್ಲವು ನನಗೆ ಗೊತ್ತಿದೆ. ನೀನು ನನಗೆ ಬಂಧುವಲ್ಲ ಆದರೂ ನಾನು ಕಾಯಿಲೆ ಬಿದ್ದಾಗ ಎಷ್ಟೋ ಸಲ ಅಸಯ್ಯ ಪಡದೆ ನನ್ನನ್ನು ನೋಡಿಕೊಂಡಿದ್ದೀಯ. ನನಗೂ ನಿನ್ನ ಮೇಲೆ ಅದೇ ಸ್ನೇಹ, ಕಾಳಜಿ ಇದೆ. 

ನಾನು ನನ್ನ ಮಕ್ಕಳಂತೆ ಸ್ವಾರ್ಥಿಯಾಗಿ ನಿನ್ನನ್ನು ಬಿಟ್ಟು ಹೋಗಿ ಈ ವಯಸಸ್ಸಿನಲ್ಲಿ ಏನನ್ನು ಸಾಧಿಸುತ್ತೇನೆ? 

ನಿನಗೆ ಒಪ್ಪಿಗೆ ಇದ್ದರೆ, ನೀನು ನನ್ನ ಜೊತೆ  ಬಾ ಇಬ್ಬರು ಎಲ್ಲಾದರೂ ಹೋಗಿ ಉಳಿದಿರುವ ನಮ್ಮ ಜೀವನವನ್ನು ಹೊಸದಾಗಿ ನಡೆಸೋಣ. ಯಾವತ್ತಾದರೂ ನನ್ನ ಮಗ ಅಥವಾ ಮಗಳು ಮತ್ತೆ ನಮ್ಮನ್ನು ಅವರೊಂದಿಗೆ ಕರೆದುಕೊಂಡು ಹೋಗಲು ಬರುತ್ತಾರೆ ಎಂದು ನಾವು ಅವರ ಮೇಲೆ ಇಟ್ಟಿರುವ ಹುಸಿ ನೀರಿಕ್ಷೆ ಇದೆಲ್ಲವೂ ನಮ್ಮನ್ನು ಹುಚ್ಚರಂತೆ ಮಾಡಿಸುತ್ತಿದೆ. ಆಯಸ್ಸು ಇರೋವರೆಗೂ ಈ  ಜೈಲಿನಲ್ಲಿ ಇರಬೇಕು. ಮಕ್ಕಳು ಚೆನ್ನಾಗಿರಬೇಕು ಎಂದು ನಾವು ಎಷ್ಟೋ ಪಾಡು ಪಡುತ್ತೇವೆ ಆದರೆ ಮುಪ್ಪಿನ ಕಾಲದಲ್ಲಿ ನಮ್ಮನ್ನು ಬೀದಿಗೆ ದಬ್ಬುತ್ತಾರೆ. 

ಎಲ್ಲೋಗುತ್ತೆ ಕಾಲ? ನಮ್ಮ ಮಕ್ಕಳಿಗೂ ಅವರ ಮಕ್ಕಳು ಮಾಡುವುದು ಇದುವೇ. 

ಮಗಳಲ್ಲದಿದ್ದರೂ ಇಲ್ಲಿಯ ವರೆಗೆ ಬಂದು ಬಾ “ಅಪ್ಪಯ್ಯ” ಅಂತ ಕರೆಯುತಿದ್ದಾಳೆ. ನಮಗೂ ಎಲ್ಲರಂತೆ ಬದುಕಲು ಹಕ್ಕು ಇದೆ. ಇರೋವಷ್ಟು ದಿನ ಚಿಂತೆಯಿಲ್ಲದೆ ಖುಷಿಯಾಗಿ ಇರೋಣ” ಎಂದು ಹೇಳಿದರು. 

ಪರಮಯ್ಯ, ನೇರವಾಗಿ  ರಮಣಿ ಕುಳಿತಲ್ಲಿ ಹತ್ತಿರ ಹೋಗಿ  “ನೋಡಮ್ಮ ನಿನಗೆ ನಾವು ಭಾರವಾಗಬಾರರು ಹಾಗಾಗಿ ಸ್ವಲ್ಪ ದಿನಗಳ ಕಾಲ ಮಾತ್ರ ನಾವು ನಿಮ್ಮೊಂದಿಗೆ ಇರುತ್ತೇವೆ. ನಂತರ ಮತ್ತೆ ವಾಯೋಧಾಮಕ್ಕೆ ಬರುತ್ತೇವೆ” ನಮ್ಮಿಂದ ನಿಮಗೆ ಏನು ಪ್ರಯೋಜನವಿಲ್ಲ ಆದರೆ ನಿಜವಾಗಲೂ ನನಗೆ ಇಲ್ಲಿಯ ವಾತಾವರಣ ಉಸಿರುಗಟ್ಟಿಸುತ್ತಿದೆ. ಸ್ವಲ್ಪ ದಿನಗಳ ಕಾಲ ಹೊರ ಪ್ರಪಂಚ ನೋಡುವ ಆಸೆಯಲ್ಲಿ ನಿನ್ನ ಜೊತೆ ನಾನು ಬರುತ್ತಿದ್ದೇನೆ. ನಿನಗೇನೂ ಅಭ್ಯಂತರ ಇಲ್ಲದಿದ್ರೆ ನನ್ನ ಜೊತೆ ಪದ್ಮಿನಿಯು ಬರುತ್ತಾಳೆ. ಎಂದರು

“ಅಪ್ಪಯ್ಯ ಅಷ್ಟಕ್ಕೂ ಅದು ನಿನ್ನ ಮನೆನೇ. ನಿನ್ನ ಆಶೀರ್ವಾದದಿಂದ ನಾನು ನನ್ನ ಸಂಸಾರ ಸುಖವಾಗಿದ್ದೇವೆ. ನೀವು ಮತ್ತು ಅಮ್ಮೋವ್ರು ನನಗೆ ಕೊಟ್ಟ ಹೊಸ ಜೀವನ ಇದು ನಿಮಗೆ ಎಷ್ಟು ದಿನಗಳ ಕಾಲ ಇರಬೇಕು ಅಂದುಕೊಳ್ಳುತ್ತಿರೋ  ಅಷ್ಟು ದಿನಗಳವರೆಗೂ ನಮ್ಮೊಂದಿಗೆ ಇರಿ. ನಮಗೆ ಯಾರಿಗೂ ಏನು ಅಭ್ಯಂತರವಿಲ್ಲ.” ಎಂದು ಹೇಳಿ ಇಬ್ಬರ ಬಟ್ಟೆ, ಔಷದಿಗಳನೆಲ್ಲ ತೆಗೆದುಕೊಂಡು ಹೊರಡಿದರು. 

ಕಾರು ರಮಣಿ ಮನೆಗೆ ಹತ್ತಿರ ಸಾಗುತ್ತಿದ್ದಂತೆ “ನನಗೇನೋ ತುಂಬಾ ವರ್ಷಗಳ ಹಿಂದೆ ಈ ಜಾಗಕ್ಕೆ ಬಂದಂತ್ತೆ ಆಗುತ್ತಿದೆ. ವಯಸ್ಸಾಯಿತು ಹಾಳಾದ ಈ ವೃದ್ದಾಶ್ರಮ ಸೇರಿದ ಮೇಲಂತೂ, ಯಾವು ಊರು ಜ್ಞಾಪಕ ಬರುತ್ತಿಲ್ಲ” ಎಂದು ಪರಮಯ್ಯ ಹೇಳಿ ಕಾರಿನಿಂದ ಕೆಳಗೆ ಇಳಿದರು.

“ಅಪ್ಪಯ್ಯ, ಇದು ಯಾವ ಜಾಗ ಅಂತ ನೆನಪಾಯಿತೇ” ಎಂದು ರಮಣಿ ಕೇಳಲು.

“ಇಲ್ಲ ಮಗು ಆದರೆ ತುಂಬ ವರ್ಷದ ಹಿಂದೆ ನಾನು ಇಲ್ಲಿ ಬಂದಿದ್ದೇನೆ ಎಂದು ಮಾತ್ರ ಗೊತ್ತು” ಎಂದು ಮನೆಯ ಒಳಗೆ ಹೊಕ್ಕಿದಾಗ ಅಚ್ಚರಿಯಿಂದ ಗೋಡೆಯ ಮೇಲಿನ ಫೋಟೋವನ್ನು ಪರಮಯ್ಯ ಹಾಗು ಪದ್ಮಿನಿಯಮ್ಮನವರು ನೋಡಿದರು.

ಒಂದು ಹೆಂಗಸಿನ ಫೋಟೋ ಅದರ ಕೆಳಗೆ ಹೆಸರು “ಪದ್ಮವಸಂತಿ”, ಜನನ ಹಾಗು ಮರಣದ ದಿನಾಂಕ ಬರೆಯಲಾಗಿತ್ತು. ಪರಮ್ಮಯ್ಯನವರ ಎರಡು ಕಣ್ಣುಗಳಲ್ಲಿಯೂ ನೀರು ತುಂಬಿಕೊಂದು ಕುರ್ಚಿಯ ಮೇಲೆ ಕುಳಿತುಕೊಂಡರು. ಪದ್ಮಿನಿಯಮ್ಮನವರು ಇವರು…. “ ಹೌದು ಇವರೇ ನಮ್ಮ ಅಮ್ಮೋವ್ರು, ಇವರ ಹೆಸರು ಪದ್ಮವಸಂತಿ, ನನಗೆ ಹದಿನಾಲ್ಕನೇ ವಯಸ್ಸಲ್ಲಿ ಇದ್ದಾಗ ಅಪ್ಪಯ್ಯ ಮತ್ತೆ ಅಮ್ಮಾವ್ರ ಜೊತೆ ಈ ತೋಟದ ಮನೆಗೆ ಬಂದಿದ್ದೆ.” ಎಂದು ರಮಣಿ ಹೇಳಿದಳು

“ಅಮ್ಮೋವ್ರುಗೆ ಮಲೆನಾಡು ಅಂದರೆ ತುಂಬಾ ಇಷ್ಟ ಹಾಗಾಗಿ ಇಲ್ಲಿ ಇರೋ ಈ ಮನೆ ಮತ್ತೆ ಎರಡು ಎಕರೆ ಗದ್ದೆ, ಕಡಿಮೆ ಬೆಲೆಗೆ ಮಾರುತ್ತ ಇದ್ದಾರೆ ಅಂತ ಯಾರಿಗೂ ವಿಷಯ ತಿಳಿಸದೇ ತೊಗೊಂಡಿದ್ರು. ನನಗೆ ಮದುವೆ ಆದಮೇಲೆ ಅಮ್ಮೋವ್ರು ಈ ಮನೆ ಹಾಗು ಜಮೀನನ್ನು ನೋಡ್ಕೊಳ್ಳೋಕ್ಕೆ ಇಲ್ಲೇ ಇರೋ ಹಾಗೆ ವ್ಯವಸ್ಥೆ ಮಾಡಿದ್ರು. ನೋಡಿ ಹತ್ತು ವರ್ಷ ಬೇಕಾಯಿತು ಇವಾಗ ತೋಟ ಸಮೃದ್ಧಿಯಾಗಿದೆ. ಅಮ್ಮವ್ರಿಗೆ ಇಲ್ಲಿಗೆ ಮತ್ತೆ ಬರೋ ಭಾಗ್ಯ ದೇವರು ಕೊಡಲಿಲ್ಲ. ಆದ್ರೆ ಅಪ್ಪಯ್ಯನಾದ್ರು ಇಲ್ಲಿ ಓಡಾಡ್ಕೊಂಡು ಸುಖವಾಗಿ ಇರಲಿ ಅಂತಾನೇ ನಾನು ನಿಮ್ಮನ್ನು ಕರೆದುಕೊಂಡು ಹೋಗೋಕ್ಕೆ ಬಂದೆ.

ದೇವರು ನಮ್ಮ ಅಪ್ಪಯ್ಯಂಗೆ ಮತ್ತೆ “ಪದ್ಮ” ಅನ್ನೋ ಹೆಸರಲ್ಲಿ ಇನ್ನೊಂದು ಜೀವ ಆಸರೆಯಾಗಿ ಕೊಟ್ಟಿದ್ದಾರೆ ಅದೇ ದೊಡ್ಡ ಖುಷಿ.

“ದೂರದ ಪ್ರಯಾಣ ಮಾಡಿ ಆಯಾಸವಾಗಿರುತ್ತೆ. ರೀ.. ಅಪ್ಪಯ್ಯಂಗೂ, ಅಮ್ಮವ್ರಿಗೂ ತೋಟದಿಂದ ಎಳನೀರು ತೆಗೊಂಡು ಬನ್ನಿ, ನಾನು ಬೇಗನೆ ಅಡುಗೆಗೆ ಸಿದ್ದ ಮಾಡಿಕೊಳ್ಳುತ್ತೇನೆ” ಎಂದು ರಮಣಿ ಮನೆಯೊಳಗೆ ಹೋದಳು.

ಇಬ್ಬರು ಹಿರಿಯರು ಹೊರಗೆ ಕುಳಿತು, ಪ್ರಶಾಂತ ಪರಿಸರವನ್ನು ಆನಂದಿಸಿದರು. ಪರ್ವತಗಳ ಮೂಲಕ ಬೀಸುವ ತಂಗಾಳಿಯನ್ನು ವೀಕ್ಷಿಸಿದರು, ಎತ್ತರದ ತೆಂಗಿನ ಮರಗಳು ಆಕಾಶದುದ್ದ ಆಕರ್ಷಕವಾಗಿ ಹರಡಿರುವ ತೆಂಗಿನ ಗರಿಗಳು, ಹತ್ತಿರದಲ್ಲೆ  ಸೊಂಪಾದ ಮಾವಿನ ತೋಪು, ತರಕಾರಿಗಳು, ಹೂವುಗಳು ಮತ್ತು ಹಣ್ಣುಗಳನ್ನು ಕೃತಜ್ಞತೆಯಿಂದ ತುಂಬಿದ ನೋಟದಿಂದ ನೋಡುತ್ತಾ ತೆಂಗಿನ ನೀರಿನ ಪ್ರತಿ ಗುಟುಕು ಸವಿಯುತ್ತಿದ್ದರು, ಈ ವಿಮೋಚನಿಯ ಕ್ಷಣಕ್ಕೆ ಮನಸ್ಸಿನಲ್ಲೇ ವಂದಿಸುತ್ತಾ ರಕ್ತ ಸಂಬಂಧ ಇಲ್ಲದಿದ್ದರೂ  ರಮಣಿ ಹಾಗು ರಮಣಿಯ ಗಂಡ ತೋರಿಸುತ್ತಿದ್ದ ಕಾಳಜಿ ಮತ್ತು ವಾತ್ಸಲ್ಯದ ಆಳಕ್ಕೆ ಮನಸೋತ ಪರಮಯ್ಯ ಕಣ್ಣಲ್ಲಿ ನೀರು ಸುರಿಸುತ್ತಾ ಧನ್ಯೋಸ್ಮಿ ಎಂದರು. 

100%
OVERALL

Reviewed by 2 users

  • Well written ಹೀಗೆ ಮುಂದುವರಿಸಿ

    • 8 months ago

    Well written ಹೀಗೆ ಮುಂದುವರಿಸಿ

  • Amazing!

    • 8 months ago

    ಕತೆ ತುಂಬಾ ಚೆನ್ನಾಗಿದೆ

Leave feedback about this

  • Quality
  • Price
  • Service
Choose Image