ಪ್ರೀತಿಯ ಮಮ್ಜಾರ್… ನನ್ನ ಅಂತರಂಗದ ಪ್ರತಿ ಭಾವಕ್ಕೂ ನೀನೇ ಸಾಕ್ಷಿ
ದುಬೈ ಮತ್ತು ಶಾರ್ಜಾದಂತಹ ಯಾಂತ್ರಿಕ ನಗರಗಳ ಭರಾಟೆಯ ನಡುವೆ, ಎಂಥ ಪ್ರಶಾಂತತೆಯಿಂದ ನೆಲೆಸಿರುವೆ ನೀನು, ಓ ಸುಂದರ ಮಮ್ಜಾರ್! ನೀನು ಕೇವಲ ಜನ ವಿಹರಿಸುವ, ಮುಸ್ಸಂಜೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವ ಒಂದು ಸಾಧಾರಣ ಕಡಲತೀರವಲ್ಲ. ಬದುಕಿನ ಓಟದಲ್ಲಿ ದಣಿದ ಜೀವಗಳಿಗೆ, ಒಮ್ಮೆ ನಿಂತು ನಿಟ್ಟುಸಿರು ಬಿಡಲು ಮತ್ತು ಕಳೆದುಹೋದ ನೆಮ್ಮದಿಯನ್ನು ಮರಳಿ ಹುಡುಕಿಕೊಳ್ಳಲು ಇರುವ ಒಂದು ಆಪ್ತ ತಾಣ ನೀನು.
ಮಮ್ಜಾರ್, ನನಗೆ ನೀನು ಕೇವಲ ಉಪ್ಪುನೀರು ಮತ್ತು ಮರಳಿನ ರಾಶಿಯಲ್ಲ. ನನ್ನ ಬದುಕಿನ ಎಲ್ಲಾ ಮಗ್ಗಲುಗಳನ್ನೂ ನೀನು ಹತ್ತಿರದಿಂದ ಕಂಡಿರುವೆ. ನನ್ನವರನ್ನು ನೆನೆದು ಕಣ್ಣೀರಾದಾಗ, ಬದುಕು, ಪ್ರೀತಿ ಮತ್ತು ಭವಿಷ್ಯದ ಅನಿಶ್ಚಿತತೆಗಳ ಸುಳಿಯಲ್ಲಿ ಸಿಲುಕಿ ನಿನ್ನ ಮಡಿಲಲ್ಲಿ ಕುಳಿತ ನನ್ನನ್ನು ನೀನು ಆಲಂಗಿಸಿರುವೆ.
ನನ್ನ ಆಪ್ತರನ್ನು ಕಳೆದುಕೊಂಡಾಗಿನ ಶೋಕಕ್ಕೆ ನೀನು ಮೂಕಸಾಕ್ಷಿಯಾಗಿದ್ದೀಯೆ. ಹಾಗೆಯೇ, ನನ್ನ ನಗುವಿಗೆ, ನನ್ನ ಕನಸುಗಳಿಗೆ ಮತ್ತು ಹುಣ್ಣಿಮೆಯ ಬೆಳದಿಂಗಳಲ್ಲಿ ನನ್ನೊಳಗೆ ಚಿಮ್ಮಿದ ಜೀವಂತಿಕೆಗೂ ನೀನೇ ಕನ್ನಡಿಯಾಗಿರುವೆ.
ಜಗತ್ತಿನ ಯಾವ ಕಿವಿಯೂ ಆಲಿಸದ ನನ್ನೆದೆಯ ಮಾತುಗಳಿಗೆ ನಿನ್ನ ಅಲೆಗಳು ದನಿಯಾಗಿವೆ. ಯಾರೂ ಇರದಿದ್ದರೂ, ಯಾವುದೋ ಕಾಲ್ಪನಿಕ ಜೀವದೊಡನೆ ನನ್ನ ಭಯ, ಆಸೆ ಮತ್ತು ಒಳತೋಟಿಗಳನ್ನು ಹಂಚಿಕೊಂಡಾಗ, ನಿನ್ನ ಅಲೆಗಳು ನನ್ನನ್ನು ಅಕ್ಕರೆಯಿಂದ ಆಲಿಸುತ್ತಿವೆ ಎಂದೇ ನನಗನ್ನಿಸುತ್ತಿತ್ತು.
ಆ ಕಡಲೊಡಲಿನ ಸದ್ದು ನನ್ನೆದೆಗೆ ಸಾಂತ್ವನ ಎರೆಯಿತು. ಎಷ್ಟೇ ಭಾರವಾದ ನೋವಾದರೂ, ಆ ಅಂತ್ಯವಿಲ್ಲದ ದಿಗಂತದಂತೆ ಒಂದು ದಿನ ಕರಗಿಹೋಗುತ್ತದೆ ಎಂಬ ಸತ್ಯವನ್ನು ನಿನ್ನ ಅಲೆಗಳು ನನಗೆ ಪಿಸುಗುಟ್ಟಿದವು.
ಗುಡ್ಡಬೆಟ್ಟಗಳು, ದಟ್ಟ ಕಾನನ ಮತ್ತು ಹಸಿರಿನಿಂದಲೇ ಕಂಗೊಳಿಸುವ ಮಲೆನಾಡಿನ ಸೆರಗಿನ ಸಕಲೇಶಪುರದಿಂದ ಬಂದ ನನಗೆ, ಪ್ರಕೃತಿಯ ನಂಟು ಹುಟ್ಟಿನಿಂದಲೇ ಒಲಿದದ್ದು. ಮಮ್ಜಾರ್, ನನ್ನ ತವರಿನ ಕಾಡುಗಳಾಗಲೀ, ಹಸಿರಿನ ವಿಸ್ತಾರವಾಗಲೀ ನಿನ್ನಲ್ಲಿಲ್ಲದೇ ಇರಬಹುದು;
ಆದರೆ ನಿನ್ನದೇ ಆದ ಒಂದು ವಿಶಿಷ್ಟ ಸೌಂದರ್ಯ ನಿನ್ನಲ್ಲಿದೆ. ನಿನ್ನ ಅಲೆಗಳ ಮೆಲು ನರ್ತನ, ಆ ತಂಗಾಳಿ, ಬೆಳದಿಂಗಳ ರಾತ್ರಿ ಮತ್ತು ಮನುಷ್ಯ ತನ್ನನ್ನು ತಾನು ಮರುಸೃಷ್ಟಿಸಿಕೊಳ್ಳಲು ಅನುವು ಮಾಡಿಕೊಡುವ ಆ ದೈವಿಕ ಮೌನ… ಇವೆಲ್ಲವೂ ನನ್ನನ್ನು ನಿನ್ನತ್ತ ಸೆಳೆದಿವೆ.
ಕೆಲವು ಜಾಗಗಳು ಕೇವಲ ಭೂಪಟದಲ್ಲಿ ಗುರುತಿಸುವ ಸ್ಥಳಗಳಲ್ಲ; ಅವು ನಮ್ಮ ಜೀವನಯಾನದ ಅವಿಭಾಜ್ಯ ಅಂಗವಾಗಿಬಿಡುತ್ತವೆ.
ನಮ್ಮ ನೆನಪುಗಳು, ನಮ್ಮ ಕಣ್ಣೀರು, ನಮ್ಮ ನಗು ಮತ್ತು ಜಗತ್ತಿಗೆಂದೂ ಹೇಳದ ನಮ್ಮೆದೆಯ ಕಥೆಗಳನ್ನು ಅವು ತಮ್ಮ ಒಡಲಲ್ಲಿ ಭದ್ರವಾಗಿ ಬಚ್ಚಿಟ್ಟುಕೊಳ್ಳುತ್ತವೆ.
ಪ್ರೀತಿಯ ಮಮ್ಜಾರ್… ನನ್ನ ಆ ಮೌನ ಕಥೆಗಳನ್ನೆಲ್ಲಾ ನಿನ್ನ ಅಲೆಗಳ ನಡುವೆ ಶಾಶ್ವತವಾಗಿ ಜೋಪಾನ ಮಾಡಿದ ನಿನಗೆ, ನನ್ನದೊಂದು ನಮನ.

Leave feedback about this