ಎರಡು ಕಪ್ ಕಾಫಿ ಮತ್ತು ಒಬ್ಬ ವೃದ್ಧ
ಜೀವನದ ಜಂಜಾಟದಲ್ಲಿ ನಮ್ಮ ಕಣ್ಣನ್ನು ಹಾದುಹೋಗುವ, ಆದರೆ ಮನಸ್ಸಿಗೆ ಎಂದಿಗೂ ಅರ್ಥವಾಗದ ಕೆಲವು ನಿಗೂಢ ಕ್ಷಣಗಳಿರುತ್ತವೆ.
ಸಾವಿರಾರು ಜನರ ನಡುವೆ ಹಠಾತ್ತಾಗಿ ಎದ್ದು ಕಾಣುವ ಯಾವುದೋ ಅಪರಿಚಿತ ಮುಖ…
ವೇಗವಾಗಿ ಓಡುವ ರೈಲಿನ ಕಿಟಕಿಯಿ೦ದ ಬದುಕಿನ ಶೂನ್ಯತೆಯನ್ನೇ ದಿಟ್ಟಿಸುತ್ತಿರುವ ಒಬ್ಬ ಪ್ರಯಾಣಿಕ…
ವಿಮಾನ ನಿಲ್ದಾಣದ ಕೊನೆಯ ವಿಮಾನವೂ ಹಾರಿಹೋದ ಮೇಲೆಯೂ ಯಾರನ್ನೋ ಕಾಯುತ್ತಾ ನಿಂತಿರುವ ಒಂಟಿ ಜೀವ…
ಕೆಲವು ತಿಂಗಳ ಹಿಂದೆ, ನಾನೊಂದು ಕೆಫೆಯಲ್ಲಿ ಪ್ರಶಾಂತವಾಗಿ ಕುಳಿತಿದ್ದಾಗ ಆ ದೃಶ್ಯ ನನ್ನ ಕಣ್ಣಿಗೆ ಬಿತ್ತು. ಒಬ್ಬ ಇಳಿವಯಸ್ಸಿನ ವೃದ್ಧರು ಎರಡು ಕಪ್ ಬ್ಲ್ಯಾಕ್ ಕಾಫಿ ತರಿಸಿದರು.
ಅದರಲ್ಲೊಂದು ಕಪ್ ಕಾಫಿಯನ್ನು ಮೆಲ್ಲನೆ ಸವಿದರು.
ಮತ್ತೊಂದು ಕಪ್ ಕಾಫಿ ಮಾತ್ರ, ಯಾರೂ ಮುಟ್ಟದೆ ಅವರ ಎದುರಿಗೇ ತಣ್ಣಗಾಗುತ್ತಿತ್ತು.
ನಾನು ಅವರನ್ನು “ಏಕೆ?” ಎಂದು ಪ್ರೀತಿಯಿಂದ ಕೇಳುವ ಸಾಹಸಕ್ಕೆ ಹೋಗಲಿಲ್ಲ. ಆದರೆ, ಆ ಕೆಫೆಯ ಮೆಟ್ಟಿಲಿಳಿದು ಹೊರಬರುವಷ್ಟರಲ್ಲಿ, ನನ್ನೊಳಗಿನ ಕಲ್ಪನಾ ಲೋಕ ಈ ಸುಂದರ ಕಥೆಯನ್ನು ಹೆಣೆಯಲು ಶುರುಮಾಡಿತ್ತು.
ಬಹುಶಃ ನಿಜವಾಗಿ ನಡೆದಿದ್ದು ಹೀಗಲ್ಲದಿರಬಹುದು…
ಆದರೆ, ನನ್ನ ಮನಸ್ಸು ಹೆಣೆದ ಆಪ್ತವಾದ ಕಥೆ ಇಲ್ಲಿದೆ.
ಎರಡು ಕಪ್ ಕಾಫಿ
ಪ್ರತಿದಿನ ಬೆಳಿಗ್ಗೆ ಸರಿಯಾಗಿ 7:30ರ ಗಂಟೆಯಾಗುತ್ತಿದ್ದಂತೆ ಆ ಕೆಫೆಯ ಬಾಗಿಲು ಸದ್ದಿಲ್ಲದೆ ತೆರೆಯುತ್ತಿತ್ತು.
ಅಲ್ಲಿನ ಕೆಲಸಗಾರರು ಈಗ ಯಾರೂ ತಿರುಗಿಯೂ ನೋಡುತ್ತಿರಲಿಲ್ಲ. ಏಕೆಂದರೆ, ಒಳಗೆ ಹೆಜ್ಜೆ ಇಡುತ್ತಿರುವುದು ಯಾರೆಂದು ಅವರಿಗೆ ನೆನಪಿನಾಳದಲ್ಲೇ ಇಳಿದುಹೋಗಿತ್ತು!
ಅಚ್ಚುಕಟ್ಟಾದ ಉಡುಪು, ಕೈಯಲ್ಲೊಂದು ಕಾಲದ ಗುರುತು ಹೊತ್ತ ಹಳೆಯ ಚರ್ಮದ ಚೀಲ… ಆ ವೃದ್ಧರು ಬಂದವರೇ ನೇರವಾಗಿ ಹೋಗಿ ಕಿಟಕಿಯ ಪಕ್ಕದಲ್ಲಿದ್ದ ಅದೇ ನೆಚ್ಚಿನ ಟೇಬಲ್ ಬಳಿ ಕುಳಿತುಕೊಳ್ಳುತ್ತಿದ್ದರು.
“ಎರಡು ಬ್ಲ್ಯಾಕ್ ಕಾಫಿ ಕೊಡಿ, ಪ್ಲೀಸ್…”
ಅವರ ಧ್ವನಿಯಲ್ಲಿ ಎಂದೂ ಬದಲಾವಣೆ ಇರಲಿಲ್ಲ. ಅವರದ್ದು ಯಾವಾಗಲೂ ಎರಡೇ ಕಪ್ ಕಾಫಿ, ಎಂದಿಗೂ ಒಂದಲ್ಲ!
ತಮ್ಮ ಮೊದಲ ಕಾಫಿ ಕಪ್ ಅನ್ನು ಎರಡೂ ಕೈಗಳಲ್ಲಿ ಜತನವಾಗಿ ಹಿಡಿದು, ಪ್ರತಿ ಕೆಂಪು ಸವಿಯಲ್ಲೂ ಯಾವುದೋ ನೆನಪಿಗೆ ಜಾರುತ್ತಿದ್ದರು. ಆದರೆ, ಅವರ ಎದುರಿಗಿದ್ದ ಎರಡನೇ ಕಪ್ ಹಾಗೆಯೇ ಕಾದು ಕಾದು ತಣ್ಣಗಾಗುತ್ತಿತ್ತು. ಎದುರಿನ ಆ ಮರದ ಕುರ್ಚಿ ಸದಾ ಖಾಲಿಯಾಗಿಯೇ ಇರುತ್ತಿತ್ತು.

ವರ್ಷಗಳಿಂದ ಅವರನ್ನು ನೋಡುತ್ತಿದ್ದ ಅಲ್ಲಿನ ಗ್ರಾಹಕರು ತಮ್ಮ ಮನಸ್ಸಿನಲ್ಲೇ ನೂರಾರು ಕಥೆಗಳನ್ನು ಹೆಣೆದುಕೊಂಡಿದ್ದರು:
- ಅಯ್ಯೋ ಪಾಪ, ಅವರು ಬಹುಶಃ ತಮ್ಮ ಧರ್ಮಪತ್ನಿಯನ್ನು ಕಳೆದುಕೊಂಡಿರಬೇಕು…
- ಅಥವಾ ಎಂದೋ ಮನೆ ತೊರೆದು ಹೋಗಿ, ಮತ್ತೆಂದೂ ಹಿಂತಿರುಗಿ ಬರದ ಮಗನಿಗಾಗಿ ಕಾದು ಕುಳಿತಿರಬಹುದು…
ನಿಜವಾದ ಕಥೆ ಯಾರಿಗೂ ತಿಳಿದಿರಲಿಲ್ಲ, ಯಾರೊಬ್ಬರೂ ಅದನ್ನು ಕೇಳುವ ಧೈರ್ಯವನ್ನೂ ಮಾಡಿರಲಿಲ್ಲ.
ಅದೊಂದು ಮಳೆ ಹನಿಯುತ್ತಿದ್ದ ಮಂಗಳವಾರದ ಬೆಳಗಿನವರೆಗೂ…
ಒಂದು ಸರಳ ಪ್ರಶ್ನೆ
ಅಂದು ಹೊಸದಾಗಿ ಕೆಲಸಕ್ಕೆ ಸೇರಿದ್ದ ಆ ಕೆಫೆಯ ಹುಡುಗಿ, ಅವರ ಟೇಬಲ್ ಮೇಲೆ ಎರಡು ಕಪ್ ಕಾಫಿ ತಂದಿಟ್ಟಳು.
ಮೊಗದಲ್ಲಿ ಸಣ್ಣದೊಂದು ನಗುವನ್ನಿಟ್ಟು, ಅತ್ಯಂತ ವಿನಯದಿಂದ ಕೇಳಿದಳು—
“ತಪ್ಪಾಗಿ ತಿಳಿಯದಿದ್ದರೆ, ನಾನೊಂದು ವಿಷಯ ಕೇಳಬಹುದೇ ಅಜ್ಜ?”

ವೃದ್ಧರು ತಮ್ಮ ಪ್ರಶಾಂತವಾದ ಕಣ್ಣುಗಳಿಂದ ಅವಳೆಡೆಗೆ ನೋಡಿ, “ಧಾರಾಳವಾಗಿ ಕೇಳು ಮಗಳೇ…” ಎಂದರು.
“ನೀವು ದಿನವೂ ಎರಡು ಕಾಫಿ ಆರ್ಡರ್ ಮಾಡುತ್ತೀರಲ್ಲ?”
“ಹೌದು…”
“ಆದರೆ ಕುಡಿಯುವುದು ಒಂದನ್ನು ಮಾತ್ರ?”
ಅವರು ತಮ್ಮ ಎದುರಿಗಿದ್ದ ಆ ಖಾಲಿ ಕುರ್ಚಿಯನ್ನೊಮ್ಮೆ ನಿಸರ್ಗದಂತೆ ದಿಟ್ಟಿಸಿ, “ಈ ಎರಡನೇ ಕಪ್ ಕಾಫಿ ನನ್ನದಲ್ಲಮ್ಮ…” ಎಂದರು.
ಯಾರೋ ಆಪ್ತರು ಈಗ ಬಾಗಿಲು ತೆರೆದು ಬರಲಿದ್ದಾರೆ ಎಂದು ಭಾವಿಸಿದ ಆ ಹುಡುಗಿ, “ಹೌದಾ… ಹಾಗಾದರೆ ಇದು ಯಾರಿಗೆ?” ಎಂದು ಆತುರದಿಂದ ಕೇಳಿದಳು.
ವೃದ್ಧರು ಕಿಟಕಿಯ ಗಾಜಿನ ಮೇಲಿಂದ ಜಾರುತ್ತಿದ್ದ ಮಳೆಹನಿಗಳನ್ನು ನೋಡುತ್ತಾ, “ಅವರು ಈ ಬಾಗಿಲು ತೆರೆದು ಒಳಗೆ ಹೆಜ್ಜೆ ಇಟ್ಟಾಗ ನನಗೂ ತಿಳಿಯುತ್ತದೆ!” ಎಂದರು.
ಆ ಎರಡನೇ ಕಪ್‌ನ ಒಳಕಥೆ
ಮಾರನೇ ದಿನ ಬೆಳಿಗ್ಗೆ, ಆ ಹುಡುಗಿ ಮತ್ತೆ ಅವರನ್ನು ಅಲ್ಲೇ ಕಂಡಳು.
ಅದೇ ಮೂಲೆಯ ಟೇಬಲ್… ಅದೇ ಎರಡು ಕಪ್ ಕಾಫಿ.
ಈ ಬಾರಿ ಅವಳು ಮಾತನಾಡುವ ಮುನ್ನವೇ ವೃದ್ಧರೇ ಮೌನ ಮುರಿದರು:
“ಮೂವತ್ತೆರಡು ವರ್ಷಗಳ ಹಿಂದೆ… ನಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡು, ಬದುಕೇ ಶೂನ್ಯವೆನಿಸಿದಾಗ ಹೀಗೆಯೇ ಒಂದು ಕೆಫೆಯೊಳಗೆ ಹೆಜ್ಜೆ ಇಟ್ಟಿದ್ದೆ. ಅಂದು ನನ್ನ ಕಣ್ಣಲ್ಲಿ ನೀರಿರಲಿಲ್ಲ, ಬಾಯಲ್ಲಿ ಮಾತೂ ಇರಲಿಲ್ಲ. ಈ ಜಗತ್ತು ನನ್ನನ್ನು ಸಂಪೂರ್ಣವಾಗಿ ಒಂಟಿಯಾಗಿ ಬಿಟ್ಟುಬಿಟ್ಟರೆ ಸಾಕು ಅನಿಸಿತ್ತು…”
ಅವರು ಕೊಂಚ ತಡೆದು, ಒಂದು ಸುದೀರ್ಘ ನಿಟ್ಟುಸಿರೆಳೆದು ಮುಂದುವರಿಸಿದರು:
“ಆಗೊಬ್ಬ ಅಪರಿಚಿತ ವ್ಯಕ್ತಿ ನನ್ನ ಬಳಿ ಬಂದು, ‘ನಿಮ್ಮ ಜೊತೆ ನಾನು ಸ್ವಲ್ಪ ಹೊತ್ತು ಕುಳಿತುಕೊಳ್ಳಬಹುದೇ?’ ಎಂದು ಕೇಳಿದ. ನಾನು ‘ಬೇಡ’ ಎಂದು ಮುಖ ತಿರುಗಿಸಿಕೊಳ್ಳುವಷ್ಟರಲ್ಲಿ, ಆತ ನನಗೊಂದು ಕಪ್ ಕಾಫಿ ಕೊಂಡು ತಂದಿಟ್ಟ. ಮುಂದಿನ ಒಂದು ಗಂಟೆ ನಾವಿಬ್ಬರೂ ಪ್ರಪಂಚದ ಏನೇನೋ ಸಾಮಾನ್ಯ ವಿಷಯಗಳ ಬಗ್ಗೆ ಮಾತನಾಡಿದೆವು. ಪುಸ್ತಕಗಳು, ಮಳೆ, ಪ್ರವಾಸ… ಆದರೆ, ಆ ಅಪರಿಚಿತ ನನ್ನ ಗಾಯವನ್ನು ಕೆದಕಿ, ‘ಏನಾಯಿತು?’ ಎಂದು ಒಂದು ಮಾತನ್ನೂ ಕೇಳಲಿಲ್ಲ!”
ಅವರಿಬ್ಬರೂ ಎದ್ದು ಹೊರಡುವಾಗ ಆ ಅಪರಿಚಿತ ಕೇವಲ ಇಷ್ಟೇ ಹೇಳಿದ—
“ಆಗಿದ್ದೇನೆ ಇರಬಹುದು ಆದರೆ ನಿಮ್ಮ ಇವತ್ತಿಗಿಂತ, ನಾಳೆಗಳು ನಿಮ್ಮ ಮೇಲೆ ಕರುಣೆಯಿಂದಿರಲಿ !”
“ಅದಾದ ಮೇಲೆ ನಾನು ಆ ವ್ಯಕ್ತಿಯನ್ನು ಮತ್ತೆಂದೂ ನೋಡಲೇ ಇಲ್ಲ,” ಎನ್ನುವಾಗ ವೃದ್ಧರ ಕಣ್ಣಂಚಿನಲ್ಲಿ ಸಣ್ಣ ಹನಿಯೊಂದು ಮಿಂಚಿತು.
“ಅವನ ಮುಖ ಕೂಡ ಈಗ ನನಗೆ ನೆನಪಿಲ್ಲ ಮಗಳೇ… ಆದರೆ, ಅಂದು ಆ ಅಪರಿಚಿತ ನನ್ನ ಮನಸ್ಸಿಗೆ ಕೊಟ್ಟ ಆ ಬಿಸಿ, ಆ ಸಮಾಧಾನ ನನಗೆ ಇಂದಿಗೂ ನೆನಪಿದೆ. ಹಾಗಾಗಿ … ಪ್ರತಿದಿನ ಬೆಳಿಗ್ಗೆ ನಾನು ಈ ಎರಡನೇ ಕಪ್ ಕಾಫಿ ಕೊಳ್ಳುತ್ತೇನೆ.”
ಆ ಖಾಲಿ ಕುರ್ಚಿಯ ಕರುಣೆ
ಒಂದು ವಾರದ ನಂತರ, ಒಬ್ಬ ಯುವಕ ಬಾಗಿಲು ತಳ್ಳಿ ಕೆಫೆಯೊಳಗೆ ಹೆಜ್ಜೆ ಇಟ್ಟ.
ಆತನ ಮುಖದಲ್ಲಿ ವಿಪರೀತ ಆಯಾಸವಿತ್ತು. ಉಡುಪು ಅಚ್ಚುಕಟ್ಟಾಗಿದ್ದರೂ, ಆತನ ಕಣ್ಣುಗಳಲ್ಲಿ ಯಾರಿಗೂ ಕಾಣಿಸದ, ತನ್ನೊಳಗೇ ನಡೆಯುತ್ತಿದ್ದ ಯಾವುದೋ ದೊಡ್ಡ ಸೋಲು-ಹೋರಾಟದ ಭಾರವಿತ್ತು!
ಆತ ಏನನ್ನೂ ಆರ್ಡರ್ ಮಾಡಲಿಲ್ಲ. ಕೇವಲ ಬೋರ್ಡ್ ಮೇಲಿದ್ದ ಪಟ್ಟಿಯನ್ನೇ ದಿಟ್ಟಿಸುತ್ತಾ ಒಂಟಿಯಾಗಿ ನಿಂತಿದ್ದ.
ಆ ವೃದ್ಧರು ಮೆಲ್ಲಗೆ ಕೈ ಎತ್ತಿ, “ಇಲ್ಲಿ ನೋಡಪ್ಪ … ಸ್ವಲ್ಪ ಹೊತ್ತು ನನ್ನ ಜೊತೆ ಕುಳಿತುಕೊಳ್ಳುತ್ತೀಯಾ?” ಎಂದು ಕರೆದರು.
ಯುವಕ ಹಿಂಜರಿಯುತ್ತಾ, “ಅಯ್ಯೋ ಬೇಡ ಅಜ್ಜ, ನಿಮಗೆ ತೊಂದರೆಯಾಗಬಹುದು…” ಎಂದ.
“ಖಂಡಿತ ಇಲ್ಲಪ್ಪ,” ಎಂದ ವೃದ್ಧರು, ತಮ್ಮ ಮುಂದೆ ತಣ್ಣಗಾಗದೇ ಕಾಯುತ್ತಿದ್ದ ಆ ಎರಡನೇ ಕಾಫಿ ಕಪ್ ಅನ್ನು ಆತನ ಕಡೆಗೆ ಮೆಲ್ಲನೆ ಸರಿಸಿದರು. “ನಾನು ನಿನಗಾಗಿಯೇ ಇದನ್ನು ಕಾಯ್ದಿರಿಸಿದ್ದೆ!”

ಅವರಿಬ್ಬರೂ ಸುಮಾರು ಒಂದು ಗಂಟೆ ಕಾಲ ಮಾತನಾಡಿದರು. ಕೆಲಸದ ಒತ್ತಡ, ಕುಟುಂಬ, ಕೈಗೂಡದ ಕನಸುಗಳು…
ವಿಶೇಷವೆಂದರೆ, ಅವರಿಬ್ಬರೂ ಪರಸ್ಪರ ತಮ್ಮ ಹೆಸರುಗಳನ್ನೂ ಕೇಳಿಕೊಳ್ಳಲಿಲ್ಲ! ಹೊರಡುವಾಗ ಕೇವಲ ಕೈ ಮುಗಿದು ಆತ್ಮೀ ಯವಾಗಿ ವಿದಾಯ ಹೇಳಿದರು.
ಕೆಲವೊಮ್ಮೆ, ನಮ್ಮ ಜೀವನದ ಅತ್ಯಂತ ಆಳವಾದ ಸಮಾಧಾನವನ್ನು ಕೇವಲ ಒಬ್ಬ ಅಪರಿಚಿತ ಮಾತ್ರ ನೀಡಬಲ್ಲ!
ನಾಳೆಯ ಭರವಸೆ
ಚಳಿಗಾಲದ ಮಂಜು ಕರಗಿ ವಸಂತ ಆಗಮಿಸಿತು.
ಒಂದು ಬೆಳಿಗ್ಗೆ, ಆ ಪರಿಚಿತ ಮೂಲೆಯ ಟೇಬಲ್ ಖಾಲಿಯಾಗಿಯೇ ಇತ್ತು. ಆ ವೃದ್ಧರು ಮತ್ತೆಂದೂ ಆ ಕೆಫೆಯ ಮೆಟ್ಟಿಲು ಹತ್ತಲೇ ಇಲ್ಲ…
ವಾರಗಳು ಕಳೆದವು.
ಮತ್ತೊಂದು ಪ್ರಶಾಂತವಾದ ಬೆಳಿಗ್ಗೆ, ಕೆಫೆಯ ಬಾಗಿಲು ಸದ್ದಾಯಿತು. ಅದೇ ಯುವಕ ಒಳಗೆ ಬಂದ!
ಆತ ವೇಟ್ರೆಸ್ ಕಡೆಗೆ ನೋಡಿ ಸಣ್ಣದಾಗಿ ಮುಗುಳುನಗುತ್ತಾ ಹೇಳಿದ:
“ಎರಡು ಬ್ಲ್ಯಾಕ್ ಕಾಫಿ ಕೊಡಿ, ಪ್ಲೀಸ್…”
ಅವಳು ಆತನನ್ನೇ ಒಂದು ಕ್ಷಣ ಭಾವಪರವಶಳಾಗಿ ನೋಡಿ, ನಂತರ ಹೃದಯಪೂರ್ವಕವಾಗಿ ಮುಗುಳುನಕ್ಕಳು.

ಆ ಯುವಕ ಕಿಟಕಿಯ ಪಕ್ಕದ ಅದೇ ಹಳೆಯ ಟೇಬಲ್ ಬಳಿ ಹೋಗಿ ಕುಳಿತ.
ಒಂದು ಕಪ್ ಕಾಫಿ ಆತನ ಮುಂದಿತ್ತು… ಮತ್ತೊಂದು ಕಪ್ ಎದುರಿನ ಖಾಲಿ ಕುರ್ಚಿಯ ಮುಂದೆ ಕಾಯುತ್ತಿತ್ತು!
ಆತ ಕೆಫೆಯ ಬಾಗಿಲ ಕಡೆಗೆ ನಿರೀಕ್ಷೆಯಿಂದ ನೋಡುತ್ತಿದ್ದ. ಬಹುಶಃ ತಾನು ಎಂದಿಗೂ ಭೇಟಿಯಾಗದ, ಇವತ್ತು ಮನಸ್ಸಿನಲ್ಲಿ ಯಾವುದೋ ದೊಡ್ಡ ಭಾರ ಹೊತ್ತು ನಡೆಯುತ್ತಿರುವ, ಅಥವಾ ಕೇವಲ ಯಾರೋ ಒಬ್ಬರ ಆಪ್ತ ಸಾಮೀಪ್ಯಕ್ಕಾಗಿ ಕಾಯುತ್ತಿರುವ ಮತ್ತೊಬ್ಬ ಅಪರಿಚಿತನಿಗಾಗಿ ಆತ ಕಾಯುತ್ತಿದ್ದ!
ಅಂದು ಮಧ್ಯಾಹ್ನ ನಾನು ಕೆಫೆಯಿಂದ ಹೊರಡುವಾಗ ಕೊನೆಯ ಬಾರಿಗೆ ತಿರುಗಿ ನೋಡಿದೆ.
ಆ ಎರಡನೇ ಕಪ್ ಕಾಫಿ ಇನ್ನು ಮುಟ್ಟದೇ, ಆವಿಯೇಳುತ್ತಾ ಕಾಯುತ್ತಿತ್ತು.
ನಾನು ಅಲ್ಲಿಂದ ಹೊರಟ ಮೇಲೆ ಯಾರಾದರೂ ಬಂದು ಆ ಕುರ್ಚಿಯಲ್ಲಿ ಕುಳಿತರೋ ಇಲ್ಲವೋ ನನಗಂತೂ ತಿಳಿಯಲಿಲ್ಲ.
ಆದರೆ, ಅಂದಿನಿಂದ ಯಾವುದೇ ಕೆಫೆಯಲ್ಲಿ ಒಂಟಿ ಕುರ್ಚಿಯನ್ನೋ ಅಥವಾ ತಣ್ಣಗಾಗುತ್ತಿರುವ ಕಾಫಿ ಕಪ್ ಅನ್ನೋ ನೋಡಿದಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಒಂದೇ ಮಾತು ಅನುರಣಿಸುತ್ತದೆ…
“ಇಂದಿನ ಈ ಎರಡನೇ ಕಪ್ ಕಾಫಿ, ಯಾವ ಮನಸ್ಸಿನ ಭಾರವನ್ನು ಹಗುರ ಮಾಡಲು ಕಾಯುತ್ತಿರಬಹುದು?”

Leave feedback about this